ADVERTISEMENT

Women's Asia Cup | ಶ್ರೀಲಂಕಾ ಮಹಿಳಾ ತಂಡಕ್ಕೆ ಏಷ್ಯಾ ಕಪ್‌

ಪಿಟಿಐ
Published 28 ಜುಲೈ 2024, 14:24 IST
Last Updated 28 ಜುಲೈ 2024, 14:24 IST
<div class="paragraphs"><p>ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಥಾಮತ್ತು ಮತ್ತು ಹರ್ಷಿತಾ ಸಮರವಿಕ್ರಮ&nbsp;</p></div>

ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಥಾಮತ್ತು ಮತ್ತು ಹರ್ಷಿತಾ ಸಮರವಿಕ್ರಮ 

   

ಪಿಟಿಐ

ದಂಬುಲಾ, ಶ್ರೀಲಂಕಾ: ಒಳ್ಳೆಯ ಲಯದಲ್ಲಿರುವ ಚಮರಿ ಅತಪತ್ತು ಮತ್ತು ಹರ್ಷಿತಾ ಸಮರವಿಕ್ರಮ ಅವರ ಅರ್ಧ ಶತಕಗಳ ನೆರವಿನಿಂದ ಶ್ರೀಲಂಕಾ ತಂಡ, ಭಾನುವಾರ ನಡೆದ ಮಹಿಳೆಯರ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪ್ರಬಲ ಭಾರತ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.

ADVERTISEMENT

ಭಾರತ ಮಹಿಳೆಯರಿಗೆ 9 ಆವೃತ್ತಿಗಳಲ್ಲಿ ಇದು ಫೈನಲ್‌ನಲ್ಲಿ ಎದುರಾದ ಎರಡನೇ ಸೋಲು. ಕ್ವಾಲಾಲಂಪುರದಲ್ಲಿ ನಡೆದ 2018ರ ಆವೃತ್ತಿಯಲ್ಲಿ ಮೊದಲ ಸಲ ಬಾಂಗ್ಲಾದೇಶ ಎದುರು ಫೈನಲ್‌ನಲ್ಲಿ ಸೋತಿತ್ತು. ಭಾರತ ಈ ಟೂರ್ನಿಯಲ್ಲಿ ಏಳು ಬಾರಿ ಚಾಂಪಿಯನ್ ಆಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅವರ ಅರ್ಧ ಶತಕದ ನೆರವಿನಿಂದ 6 ವಿಕೆಟ್‌ಗೆ 165 ರನ್ ಗಳಿಸಿತು. ಶ್ರೀಲಂಕಾ ಎಂಟು ಎಸೆತಗಳು ಬಾಕಿಯಿರುವಂತೆ 2 ವಿಕೆಟ್‌ಗೆ 167 ರನ್ ಹೊಡೆಯಿತು. ಈ ಪಂದ್ಯದಲ್ಲಿ ಒಟ್ಟು 332 ರನ್‌ಗಳು ಹರಿದುಬಂದಿದ್ದು, ಇದು ಭಾರತ ಮತ್ತು ಲಂಕಾ ಮಹಿಳಾ ತಂಡಗಳ ನಡುವೆ ಟಿ20 ಪಂದ್ಯದಲ್ಲಿ ಗರಿಷ್ಠ ಎನಿಸಿತು.

ಈ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿರುವ ಆರಂಭ ಆಟಗಾರ್ತಿ ಚಮರಿ (61, 43ಎಸೆತ, 4x9, 6x2) ಮತ್ತು ಹರ್ಷಿತಾ ಆವರು ಎರಡನೇ ವಿಕೆಟ್‌ಗೆ 87 ರನ್ ಜೊತೆಯಾಟದಲ್ಲಿ ಭಾಗಿಯಾದರು. ವಿಶ್ಮಿ ಗುಣರತ್ನೆ (1) ಮತ್ತೊಮ್ಮೆ ಬೇಗ ನಿರ್ಗಮಿಸಿದರು. ಚಮರಿ ನಿರ್ಗಮನದ ನಂತರ ಹರ್ಷಿತಾ ಮುರಿಯದ ಮೂರನೇ ವಿಕೆಟ್‌ಗೆ ಕವಿಶಾ ದಿಲ್ಹಾರಿ (30, 16ಎ, 4x1, 6x2) ಜೊತೆ 40 ಎಸೆತಗಳಲ್ಲಿ 73 ರನ್ ಸೇರಿಸಿ ತಂಡ ಸುರಕ್ಷಿತವಾಗಿ ಗುರಿತಲುಪುವಂತೆ ನೋಡಿಕೊಂಡರು.

ಅತಪತ್ತು 33 ಎಸೆತಗಳಲ್ಲಿ ಅರ್ಧಶತಕ ದಾಟಿದರೆ, ಹರ್ಷಿತಾ 43 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ಇವರಿಬ್ಬರು ಹೊಡೆತಗಳ ಆಯ್ಕೆಯಲ್ಲೂ ವಿಭಿನ್ನತೆ ತೋರಿದರು. ಚಮರಿ ಅವರು ಹೊಡೆತಗಳಲ್ಲಿ ಶಕ್ತಿ  ಪ್ರದರ್ಶಿಸಿದರೆ, ಹರ್ಷಿತಾ ಆಟದಲ್ಲಿ ಜಾಣ್ಮೆಯ ‘ಪ್ಲೇಸಿಂಗ್‌’ಗಳಿದ್ದವು. ಎಡಗೈ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ರಾಧಾ ಯಾದವ್ ಅವರ ಬೌಲಿಂಗ್‌ನಲ್ಲಿ ಅವರು ರಿವರ್ಸ್‌ ಸ್ವೀಪ್‌ಗಳಿಗೆ ಹಿಂಜರಿಯಲಿಲ್ಲ.

ಇದು ಶ್ರೀಲಂಕಾ ತಂಡ ಬೆಂಬತ್ತಿದ ದೊಡ್ಡ ಗುರಿಯೆನಿಸಿತು. ಈ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ 156 ರನ್ ಬೆಂಬತ್ತಿದ್ದೇ ಇದುವರೆಗಿನ ದೊಡ್ಡ ಗುರಿಸಾಧನೆ ಆಗಿತ್ತು.

ಸ್ಮೃತಿ ಮಂದಾನ ಅರ್ಧಶತಕ:

ಇದಕ್ಕೆ ಮೊದಲು, ಉಪನಾಯಕಿ ಸ್ಮೃತಿ ಮಂದಾನ (60, 47ಎಸೆತ) ಮತ್ತೊಂದು ಅರ್ಧ ಶತಕ ಗಳಿಸಿ ಹೋರಾಟ ತೋರಿದ್ದರು. ಶಫಾಲಿ ವರ್ಮಾ (16), ಉಮಾ ಚೆಟ್ರಿ (9) ಮತ್ತು ಹರ್ಮನ್‌ಪ್ರೀತ್ ಕೌರ್‌ (11) ಹೆಚ್ಚಿನ ಕೊಡುಗೆ ನೀಡಲಿಲ್ಲ. ಕೆಳ ಕ್ರಮಾಂಕದಲ್ಲಿ ಜೆಮಿಮಾ ರಾಡ್ರಿಗಸ್‌ (29, 16ಎ) ಮತ್ತು ರಿಚಾ ಘೋಷ್‌ (30, 14ಎ, 4x4, 6x1) ಅವರು ಉಪಯುಕ್ತ ಕೊಡುಗೆ ನೀಡಿದ ಕಾರಣ ಭಾರತ ತಂಡ  ಗೌರವದ ಮೊತ್ತ ಗಳಿಸಿತು.

ಲಂಕಾ ತಂಡದಲ್ಲಿ ವೇಗಿ ಉದೇಶಿಕಾ ಪ್ರಬೋಧನಿ ಬಿಟ್ಟರೆ, ಉಳಿದವರೆಲ್ಲ ನಿಧಾನಗತಿಯ ಬೌಲರ್‌ಗಳಿದ್ದರು.

ಸಂಕ್ಷಿಪ್ತ ಸ್ಕೋರು:

ಭಾರತ: 20 ಓವರುಗಳಲ್ಲಿ 6 ವಿಕೆಟ್‌ಗೆ 165 (ಸ್ಮೃತಿ ಮಂದಾನ 60, ಜೆಮಿಮಾ ರಾಡ್ರಿಗಸ್‌ 29, ರಿಚಾ ಘೋಷ್‌ 30; ಉದೇಶಿಕಾ ಪ್ರಬೋಧನಿ 27ಕ್ಕೆ1, ಕವಿಶಾ ದಿಲ್ಹಾರಿ 37ಕ್ಕೆ2, ಸಖಿನಿ ನಿಸಾನ್ಸಲಾ 20ಕ್ಕೆ1, ಚಾಮರಿ ಅಟ್ಟಪಟ್ಟು 28ಕ್ಕೆ1); ಶ್ರೀಲಂಕಾ: 18.4 ಓವರುಗಳಲ್ಲಿ 2 ವಿಕೆಟ್‌ಗೆ 167 (ಚಮರಿ ಅತಪತ್ತು 61, ಹರ್ಷಿತಾ ಸಮರವಿಕ್ರಮ ಔಟಾಗದೇ 69, ಕವಿಶಾ ದಿಲ್ಹಾರಿ ಔಟಾಗದೇ 30; ದೀಪ್ತಿ ಶರ್ಮಾ 30ಕ್ಕೆ1).

ಪಂದ್ಯದ ಆಟಗಾರ್ತಿ: ಹರ್ಷಿತಾ ಸಮರವಿಕ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.