ADVERTISEMENT

ಪಾಂಡ್ಯ ಪ್ರಮುಖ ಅಸ್ತ್ರ: ಶ್ರೀಕಾಂತ್

ಏಜೆನ್ಸೀಸ್
Published 10 ಜೂನ್ 2019, 20:09 IST
Last Updated 10 ಜೂನ್ 2019, 20:09 IST
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ   

ಲಂಡನ್: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪ್ರಮುಖ ಅಸ್ತ್ರ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ ರಾತ್ರಿ ಇಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಲು ಪಾಂಡ್ಯ ಪ್ರಮುಖ ಕಾರಣರಾಗಿದ್ದರು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು 27 ಎಸೆತಗಳಲ್ಲಿ 48 ರನ್ ಗಳಿಸಿದ್ದರು. ಹೀಗಾಗಿ ತಂಡ ಎಂಟು ವಿಕೆಟ್‌ಗಳಿಗೆ 352 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 316 ರನ್‌ಗಳಿಗೆ ಆಲೌಟಾಗಿತ್ತು. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಅಲೆಕ್ಸ್ ಕ್ಯಾರಿ ಅರ್ಧಶತಕ ಗಳಿಸಿದ್ದರು. ಇತರ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು.

‘ಹಾರ್ದಿಕ್ ಪಾಂಡ್ಯ ಅವರ ಭರ್ಜರಿ ಬ್ಯಾಟಿಂಗ್ ಪಂದ್ಯಕ್ಕೆ ತಿರುವು ನೀಡಿತ್ತು. ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ನೀಡಿದ್ದರಿಂದ ಪಾಂಡ್ಯ ಅವರಿಗೆ ಉತ್ಸಾಹ ತುಂಬಿತ್ತು. ಅವರ ಸ್ಫೋಟಕ ಬ್ಯಾಟಿಂಗ್ ಆಸ್ಟ್ರೇಲಿಯಾ ತಂಡದ ಆಟಗಾರರನ್ನು ಗಲಿಬಿಲಿಗೊಳಿಸಿತು’ ಎಂದು ಶ್ರೀಕಾಂತ್ ವಿಶ್ಲೇಷಿಸಿದರು.

ADVERTISEMENT

ಆಸ್ಟ್ರೇಲಿಯಾ ಬೆಂಬಿಡದ ‘ಟ್ಯಾಂಪರ್’ ಭೂತ!
(ರಾಯಿಟರ್ಸ್‌):
ಭಾನುವಾರದ ಸೋಲಿನೊಂದಿಗೆ ಆಸ್ಟ್ರೇಲಿಯಾದ ಸತತ 10ನೇ ಜಯದ ಆಸೆ ಕಮರಿಹೋಗಿತ್ತು. ಇದೇ ವೇಳೆ, ಚೆಂಡು ವಿರೂಪ ಆರೋಪದ ಭೂತ ತಂಡದ ಬೆನ್ನಿಗೆ ಬಿದ್ದಿದೆ ಎಂಬುದನ್ನೂ ಸಾಬೀತು ಮಾಡಿತ್ತು.

24ನೇ ಓವರ್ ಬೌಲಿಂಗ್ ಮಾಡುವ ಮುನ್ನ ಸ್ಪಿನ್ನರ್ ಆ್ಯಡಂ ಜಂಪಾ ಪ್ಯಾಂಟ್ ಜೇಬಿನೊಳಗೆ ಕೈ ಹಾಕಿದ್ದರು. ಇದು, ಚೆಂಡು ವಿರೂಪಗೊಳಿಸುವ ಯಾವುದೋ ಸಾಧನವನ್ನು ಅವರು ಜೇಬಿನಲ್ಲಿ ಇರಿಸಿಕೊಂಡಿದ್ದರು ಎಂಬ ಸಂದೇಹ ಮೂಡಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ತಂಡದ ನಾಯಕ ಆ್ಯರನ್ ಫಿಂಚ್ ‘ಆರೋಪಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಾನು ನೋಡಿಲ್ಲ. ಆದ್ದರಿಂದ ಸದ್ಯ ಏನೂ ಹೇಳಲಾರೆ. ಜಂಪಾ ಅವರು ಜೇಬಿನಲ್ಲಿ ಹ್ಯಾಂಡ್ ವಾರ್ಮರ್ಸ್‌ ಇರಿಸಿಕೊಂಡಿರಬೇಕು ಎಂಬುದು ನನ್ನ ಅನಿಸಿಕೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.