ADVERTISEMENT

ಬದಲಾದ ಸ್ಮಿತ್ ಆಟ: ಆ್ಯಷಸ್ ಕ್ರಿಕೆಟ್ ಸರಣಿಯಲ್ಲಿ ಅಮೋಘ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:33 IST
Last Updated 19 ಸೆಪ್ಟೆಂಬರ್ 2019, 19:33 IST
Steve Smith
Steve Smith   

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಐಪಿಎಲ್ ತಂಡದ ಫೀಲ್ಡಿಂಗ್ ಕೋಚ್ ಟ್ರೆಂಟ್‌ ವುಡ್‌ಹಿಲ್ ಇತ್ತೀಚೆಗೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಶೈಲಿಯ ವಿಶ್ಲೇಷಣೆ ಮಾಡಿದರು. ಅದು ಮಜವಾಗಿತ್ತು. ‘ಒಂದು ವೇಳೆ ಸ್ಮಿತ್ ಭಾರತದ ಪರವಾಗಿ ಆಡಿದ್ದಿದ್ದರೆ ಅವನ ಬ್ಯಾಟಿಂಗ್ ಶೈಲಿಯ ಕುರಿತು ಆಸ್ಟ್ರೇಲಿಯಾದ ಕಾಪಿಬುಕ್ ಕ್ರಿಕೆಟ್‌ ಪಂಡಿತರು ಟೀಕೆಗಳನ್ನೇ ಮಾಡುತ್ತಿರಲಿಲ್ಲ. ಪಾಪ, ಅವನು ಆಸ್ಟ್ರೇಲಿಯಾದ ಕ್ರಿಕೆಟ್‌ ವೈಯಾಕರಣಿಗಳ ಕೈಗೆ ಸಿಲುಕಿ ನಲಗಿಯೂ ಮೇಲೆದ್ದಿದ್ದಾನೆ’ ಎಂದಿದ್ದರು.

ಆ್ಯಷಸ್ ಕ್ರಿಕೆಟ್ ಸರಣಿ ಮುಗಿದ ಮೇಲೆ ಇಬ್ಬರು ಆಟಗಾರರ ಕುರಿತು ವಿಮರ್ಶೆ, ವಿಶ್ಲೇಷಣೆಗಳು ನಡೆದಿವೆ. ಒಬ್ಬರು–ಸ್ಮಿತ್, ಇನ್ನೊಬ್ಬರು–ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್‌. ಬರೀ 4 ಟೆಸ್ಟ್‌ಗಳಲ್ಲಿ ಸ್ಮಿತ್ 774 ರನ್‌ಗಳನ್ನು ಕಲೆಹಾಕಿದರು; ಅದೂ 110.57ರ ಸರಾಸರಿಯಲ್ಲಿ. ಕ್ರಿಕೆಟ್ ಪರಿಭಾಷೆಯಲ್ಲಿ ಇದನ್ನು ‘ಬ್ರಾಡ್‌ಮನಿಸ್ಕ್ ಆ್ಯವರೇಜ್’ (ಡಾನ್ ಬ್ರಾಡ್ಮನ್ ಸ್ವರೂಪದ ಸರಾಸರಿ) ಎನ್ನುತ್ತಾರೆ. ಈ ಶತಮಾನದಲ್ಲಿ ಟೆಸ್ಟ್‌ ಸರಣಿಯೊಂದರಲ್ಲಿ ಯಾವ ಬ್ಯಾಟ್ಸ್‌ಮನ್‌ ಕೂಡ ಇಷ್ಟೊಂದು ಕಡಿಮೆ ಪಂದ್ಯಗಳಲ್ಲಿ ಈ ರೀತಿ ರನ್‌ಗಳನ್ನು ಜಮೆ ಮಾಡಿರಲಿಲ್ಲ. ಹೀಗಾಗಿ ಇದೊಂದು ಅಪರೂಪದ ವಿದ್ಯಮಾನವೇ ಹೌದು.

ಸ್ಟೀವ್ ಸ್ಮಿತ್ ಕ್ರಿಕೆಟ್ ಬದುಕಿನಲ್ಲಿ ಹಲವು ಅನಿರೀಕ್ಷಿತಗಳು ಘಟಿಸಿವೆ. ‘ಬಾಲ್ ಟ್ಯಾಂಪರಿಂಗ್’ ಆರೋಪದ ಕಾರಣಕ್ಕೆ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದ ಅವರು ಈ ವರ್ಷ ನಡೆದ ವಿಶ್ವಕಪ್‌ ಕ್ರಿಕೆಟ್‌ನಲ್ಲೂ ಫಾರ್ಮ್‌ ಕಂಡುಕೊಳ್ಳಲು ತಡಕಾಡಿದ್ದರು. ಈಗ ಇಂಥ ಲಯಕ್ಕೆ ಮರಳಿರುವುದನ್ನು ಪರಿ ಪರಿಯಾಗಿ ಅನೇಕರು ವಿಶ್ಲೇಷಿಸುತ್ತಿದ್ದಾರೆ.

ADVERTISEMENT

ಸ್ಮಿತ್ ಅಪ್ಪ ಆಸ್ಟ್ರೇಲಿಯನ್, ಅಮ್ಮ ಇಂಗ್ಲಿಷ್ ನೆಲದವರು. ಕ್ರಿಕೆಟ್‌ ಆಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಶಾಲೆಯನ್ನು ತೊರೆದರು. ಶಿಸ್ತಿನ ವಾತಾವರಣದಲ್ಲಿ ಬೆಳೆದ ಅವರು ಚಿಕ್ಕಂದಿನಿಂದಲೂ ಕೋಪಿಷ್ಟ.

ಹತ್ತು ವರ್ಷಗಳ ಹಿಂದೆ ಸ್ಮಿತ್‌ ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಕಾಲಿಟ್ಟದ್ದು ಲೆಗ್‌ ಸ್ಪಿನ್ನರ್‌ ಆಗಿ. ಪಾಕಿಸ್ತಾನದ ವಿರುದ್ಧ 2010ರಲ್ಲಿ ಆಡಿದ ಮೊದಲ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅವರು ಮೂರು ವಿಕೆಟ್‌ ಕಿತ್ತಿದ್ದರು. ಆಮೇಲೆ ಅವರು ಬ್ಯಾಟ್ಸ್‌ಮನ್‌ ಆಲ್‌ರೌಂಡರ್‌ ಆದದ್ದು ದೊಡ್ಡ ಸ್ಥಿತ್ಯಂತರ. ಆಟದ ಸ್ಥಿರತೆಯ ಮೂಲಕವೇ ಅವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನೂ ಆದರು.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಕೆರ್ರಿಒಕೀಫ್ ಹಿಂದೊಮ್ಮೆ ಸ್ಮಿತ್ ಕೋಪಾವೇಶವನ್ನು ಟೀಕಿಸಿದ್ದರು. ‘ನಾಯಕನಿಗೆ ಇರಬೇಕಾದ ಸಂಯಮ ಅವರಿಗಿಲ್ಲ. ಪದೇ ಪದೇ ತಾಳ್ಮೆ ಕಳೆದುಕೊಂಡು ಬಡಬಡಿಸುತ್ತಾರೆ’ ಎಂದಿದ್ದರು.

ಸ್ಮಿತ್‌ಗೆ ಬೇಸ್‌ಬಾಲ್‌ ಆಟ ಇಷ್ಟ. ಕುದುರೆ ರೇಸ್‌ ಮೆಚ್ಚು. ಅವರು ಮೂರು ಕುದುರೆಗಳ ಷೇರುದಾರರೂ ಹೌದು. ಜನಪ್ರಿಯತೆಯನ್ನು ತೂಗಿಸಿಕೊಂಡು ಬರುವಲ್ಲಿ ಮೊದಲು ಎಡವಿದ್ದ ಅವರು, ಈಗ ಬ್ಯಾಟಿಂಗ್‌ ಶೈಲಿಯಲ್ಲಿ ಮಾಡಿಕೊಂಡಿರುವ ಪರಿವರ್ತನೆ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ತರಹದ ಸ್ಟ್ರೈಕ್ ಬೌಲರ್‌ಗೂ ಬೇರೆ ರೀತಿ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.