ADVERTISEMENT

ಟೀಂ ಇಂಡಿಯಾ ನಾಯಕ ಕೊಹ್ಲಿ ಬಗ್ಗೆ ಆಸಿಸ್ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 8:49 IST
Last Updated 23 ಜನವರಿ 2020, 8:49 IST
   

ನವದೆಹಲಿ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಸದ್ಯ ವಿಶ್ವಕ್ರಿಕೆಟ್‌ ಗಮನ ಸೆಳೆದಿರುವ ಪ್ರಮುಖ ಬ್ಯಾಟ್ಸ್‌ಮನ್‌ಗಳು. ಕೆಲವರು ಕೊಹ್ಲಿ ಶ್ರೇಷ್ಠ ಎಂದರೆ ಇನ್ನೂ ಕೆಲವರು ಸ್ಮಿತ್‌ ಹೆಸರು ಹೇಳುತ್ತಾರೆ. ಇವರಿಬ್ಬರ ಸಾಮರ್ಥ್ಯವೂ ಅಸಮಾನ್ಯವಾದುದು ಎಂದು ಮನಗಂಡಿರುವ ಬಹುತೇಕರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಮಿತ್‌ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೊಹ್ಲಿ ಶ್ರೇಷ್ಠ ಎನ್ನುತ್ತಾರೆ.

ಆದರೆ ವಿರಾಟ್ ಕೊಹ್ಲಿ ಕುರಿತು ಮಾತನಾಡಿರುವ ಸ್ಮಿತ್‌, ಅಸಾಮಾನ್ಯ ಕೊಹ್ಲಿ ಮತ್ತಷ್ಟು ದಾಖಲೆಗಳನ್ನು ಮುರಿಯುವುದನ್ನು ನೋಡಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ಟೀವ್‌ ಸ್ಮಿತ್‌, ಸದ್ಯ ಚರ್ಚೆಯಲ್ಲಿರುವ ನಾಲ್ಕು ದಿನಗಳ ಟೆಸ್ಟ್‌, ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌, ವಿರಾಟ್‌ ಕೊಹ್ಲಿ, ಆಸ್ಟ್ರೇಲಿಯಾ ತಂಡದ ಟೆಸ್ಟ್‌ ನಾಯಕ ಟಿಮ್‌ ಪೇನ್‌ ಹಾಗೂ ಐಪಿಎಲ್‌ ಕುರಿತಂತೆ ಮಾತನಾಡಿದ್ದಾರೆ.

‘ನಿಜವಾಗಲೂ ವಿಶ್ವಕಪ್‌ಗಾಗಿಯಾವುದೇ ಪ್ರತ್ಯೇಕ ತರಬೇತಿ ಇಲ್ಲ. ಆದರೆ, ಹೆಚ್ಚೆಚ್ಚು ಪಂದ್ಯಗಳನ್ನು ಆಡುವುದು ಮುಖ್ಯ. ಈ ಬಾರಿ ತವರಿನಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ತಂಡದ ಪರ ಆಡಲು ಉತ್ಸುಕನಾಗಿದ್ದೇನೆ. 2015ರಲ್ಲಿ ತವರಿನಲ್ಲಿ ವಿಶ್ವಕಪ್‌ ಗೆದ್ದ ತಂಡದ ಭಾಗವಾಗಿದ್ದೆ. ಟೂರ್ನಿ ನಡೆದ ಆರು ವಾರಗಳ ಅವಧಿ ನನ್ನ ಜೀವನದಲ್ಲೇ ಅಮೋಘವಾದದ್ದು. ಪ್ರತಿಕ್ಷಣವನ್ನೂ ಆಸ್ವಾದಿಸಿದ್ದೆ. ಹಾಗಾಗಿ ಖಂಡಿತಾ ಈ ಬಾರಿ ತವರಿನಲ್ಲಿ ಮತ್ತೊಂದು ವಿಶ್ವಕಪ್‌ ಜಯದಲ್ಲಿ ಭಾಗಿಯಾಗಲಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ವಿಶ್ವಕಪ್‌ ತಯಾರಿಗೆ ವೇದಿಕೆಯಾಗಲಿರುವ ಐಪಿಎಲ್‌ 2020ರಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಮುನ್ನಡೆಸಲಿರುವ ಸ್ಮಿತ್, ಹೆಚ್ಚು ಪ್ರಯೋಗಗಳಿಗೆ ಒಳಗಾಗುವುದಿಲ್ಲ. ಆದರೆ ಬೌಲಿಂಗ್ ಮಾಡುವ ಕುರಿತು ಆಲೋಚಿಸಲಿದ್ದೇನೆಎಂದಿದ್ದಾರೆ. ‘ಖಂಡಿತಾ ಹೆಚ್ಚು ಪ್ರಯೋಗಗಳನ್ನು ನಡೆಸಲು ಬಯಸುವುದಿಲ್ಲ. ಬಹುಶಃ ಬೌಲಿಂಗ್ ಮಾಡಬಹುದು. ಅದೂ ಖಚಿತವಿಲ್ಲ. ಇದರಿಂದ ಬ್ಯಾಟಿಂಗ್‌ ಮೇಲೆ ಪರಿಣಾಮ ಉಂಟಾಗುವುದರಿಂದ ಕಷ್ಟವಾಗಬಹುದು. ಏನಾಗುತ್ತದೋ ನೋಡೋಣ’ ಎಂದಿದ್ದಾರೆ.

ಕೊಹ್ಲಿ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ 30 ವರ್ಷದ ಆಟಗಾರ, ‘ಹೌದು ಆತ ಅಸಾಮಾನ್ಯ ಆಟಗಾರ. ಆತನ ಬ್ಯಾಟ್‌ನಿಂದ ಬಂದಿರುವ ರನ್‌ಗಳೇ ಅದನ್ನು ಹೇಳುತ್ತವೆ. ನನ್ನ ಪ್ರಕಾರ ಕೊಹ್ಲಿ ಮೂರೂ ಮಾದರಿಯ ಅದ್ಭುತ ಆಟಗಾರ. ಆತ ಮತ್ತಷ್ಟು ದಾಖಲೆಗಳನ್ನು ಮುರಿಯವುದನ್ನು ನೋಡಲಿದ್ದೇವೆ. ಈಗಾಗಲೇ ಸಾಕಷ್ಟು ದಾಖಲೆಗಳನ್ನು ಮುರಿದಿದ್ದಾರೆ. ಮತ್ತಷ್ಟು ವರ್ಷಗಳ ಕಾಲ ಇದು ಹೀಗೆಯೇ ಮುಂದುವರಿಯಲಿದೆ. ಕೊಹ್ಲಿಗೆ ರನ್‌ ಗಳಿಕೆಯ ಹಸಿವಿದೆ. ಹಾಗಾಗಿ ರನ್‌ ಗಳಿಕೆಯನ್ನು ಆತ ನಿಲ್ಲಿಸುವುದಿಲ್ಲ.’

‘ಒಬ್ಬ ನಾಯಕನಾಗಿ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಈಗಾಗಲೇ ನಂ.1 ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಫಿಟ್‌ನೆಸ್‌ ಮತ್ತು ಆರೋಗ್ಯದ ಕಡೆಗೆ ಸಾಕಷ್ಟು ಗಮನ ವಹಿಸುತ್ತಾರೆ. ಆತ ಭಾರತ ತಂಡವನ್ನು ಒಳ್ಳೆಯ ಸ್ಥಾನದಲ್ಲಿ ತಂದು ನಿಲ್ಲಿಸಿದ್ದು, ಅಸಾಧಾರಣ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿದ್ದ ಸ್ಮಿತ್‌ ಕಳೆದ ವರ್ಷ ತಂಡಕ್ಕೆ ಮರಳಿದ್ದರು. ಹೀಗಾಗಿ 2019ರ ವಿಶ್ವಕಪ್‌ ಟೂರ್ನಿ ವೇಳೆ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅವರನ್ನು ಪ್ರೇಕ್ಷಕರು ಗೇಲಿ ಮಾಡಿದ್ದರು. ಇದರಿಂದ ಸಿಟ್ಟಾದ ಕೊಹ್ಲಿ ಪ್ರೇಕ್ಷಕರತ್ತ ಬ್ಯಾಟ್‌ ಹಾಗೂ ಕೈ ಇಂದ ಸನ್ನೆ ಮಾಡಿ ಸ್ಮಿತ್‌ರನ್ನು ಮೂದಲಿಸುವ ಬದಲು ಬೆಂಬಲಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಮಿತ್‌, ‘ವಿರಾಟ್‌ ಕೊಹ್ಲಿಯ ಆ ನಡೆ ಅತ್ಯುತ್ತಮವಾದದ್ದು. ಅದೊಂದು ಪ್ರೀತಿಪೂರ್ವಕವಾದುದ್ದು. ನಿಜವಾಗಲೂ ಅಭಿನಂದನಾರ್ಹವಾದುದ್ದು’ ಎಂದಿದ್ದಾರೆ. ಕೊಹ್ಲಿಯ ಆ ನಡೆಯನ್ನು ಪರಿಗಣಿಸಿ ಐಸಿಸಿ 2019ನೇ ಸಾಲಿನ ‘ಸ್ಪಿರಿಟ್‌ ಆಫ್‌ ಕ್ರಿಕೆಟ್‌’ ಪ್ರಶಸ್ತಿ ನೀಡಿ ಗೌರವಿಸಿತು.

ಆಸಿಸ್‌ ಟೆಸ್ಟ್‌ ತಂಡದ ನಾಯಕ ಟಿಮ್‌ ಪೇನ್‌ ಕುರಿತು, ‘ಪೇನ್‌ ಉತ್ತಮವಾಗಿ ತಂಡ ಮುನ್ನಡೆಸಿದ್ದಾರೆ. 19 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಆ್ಯಷಸ್‌ ಸರಣಿ ಗೆದ್ದದ್ದು ಅಸಾಧಾರಣವಾದದ್ದು’ ಎಂದಿದ್ದಾರೆ. ಐಸಿಸಿಯ ನಾಲ್ಕು ದಿನಗಳ ಟೆಸ್ಟ್‌ ಪ್ರಸ್ತಾವನೆಗೆ ಸಂಬಂಧಿಸಿದಂತೆ, ‘ಐದು ದಿನಗಳ ಆಟವೇ ಹಿತವಾಗಿದೆ. ಐದು ದಿನಗಳ ಟೆಸ್ಟ್‌ ಸವಾಲನ್ನು ನಾನು ಇಷ್ಟಪಡುತ್ತೇನೆ. ನಾಲ್ಕು ದಿನಗಳ ಟೆಸ್ಟ್ ಬಗ್ಗೆ ಸಾಕಷ್ಟು ಚರ್ಚೆಗಳು ಖಂಡಿತಾ ನಡೆದಿವೆ. ಇದು (4 ದಿನಗಳ ಟೆಸ್ಟ್‌) ಹೇಗೆ ಸಾಧ್ಯವಾಗುತ್ತದೆ ಎಂಬ ಬಗ್ಗೆ ನಾನು ಆಲೋಚಿಸಿಲ್ಲ. ಆದರೆ, ವೈಯಕ್ತಿಕವಾಗಿ ಐದು ದಿನಗಳ ಟೆಸ್ಟ್‌ ನನಗಿಷ್ಟ’ ಎಂದು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಸಾಧನೆ

ಮಾದರಿ ಏಕದಿನ ಟೆಸ್ಟ್ ಟಿ20
ಪಂದ್ಯ(ಇನಿಂಗ್ಸ್‌) 245 (236) 84 (141) 77 (72)
ರನ್ 11792 7202 2689
ದ್ವಿಶತಕ 7
ಶತಕ 43 27
ಅರ್ಧಶತಕ 57 22 24
ರ‌್ಯಾಂಕ್ 1 1 9

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಮಿತ್ ಸಾಧನೆ

ಮಾದರಿ ಏಕದಿನ ಟೆಸ್ಟ್ ಟಿ20
ಪಂದ್ಯ(ಇನಿಂಗ್ಸ್‌) 121 (106) 73 (131) 36 (28)
ರನ್ 4039 7227 577
ದ್ವಿಶತಕ 3
ಶತಕ 9 26
ಅರ್ಧಶತಕ 24 29 4
ರ‌್ಯಾಂಕ್ 23 2 76

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.