ADVERTISEMENT

IND vs AUS ಟೆಸ್ಟ್ ಸರಣಿ: ಮಧ್ಯಮ ಕ್ರಮಾಂಕಕ್ಕೆ ಮರಳಲು ಸಜ್ಜಾದ ಸ್ಟೀವ್‌ ಸ್ಮಿತ್

ಪ್ರವಾಸಿ ಭಾರತ ತಂಡದ ವಿರುದ್ಧ ಸರಣಿ

ಪಿಟಿಐ
Published 14 ಅಕ್ಟೋಬರ್ 2024, 12:58 IST
Last Updated 14 ಅಕ್ಟೋಬರ್ 2024, 12:58 IST
<div class="paragraphs"><p>ಸ್ಟೀವ್‌ ಸ್ಮಿತ್</p></div>

ಸ್ಟೀವ್‌ ಸ್ಮಿತ್

   

ಪಿಟಿಐ ಚಿತ್ರ

ಮೆಲ್ಬರ್ನ್‌: ಕೆಲಕಾಲ ಆರಂಭ ಆಟಗಾರನ ಪಾತ್ರ ನಿರ್ವಹಿಸಿದ್ದ ಅನುಭವಿ ಬ್ಯಾಟರ್‌ ಸ್ಟೀವ್‌ ಸ್ಮಿತ್ ಅವರು ಪ್ರವಾಸಿ ಭಾರತ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಲ್ಲಿ ತಮ್ಮ ಮೆಚ್ಚಿನ ನಾಲ್ಕನೇ ಕ್ರಮಾಂಕಕ್ಕೆ ಮರಳಲಿದ್ದಾರೆ ಎಂದು ರಾಷ್ಟ್ರೀಯ ಆಯ್ಕೆಗಾರ ಜಾರ್ಜ್ ಬೇಲಿ ಸೋಮವಾರ ಖಚಿತಪಡಿಸಿದ್ದಾರೆ.

ADVERTISEMENT

ಡೇವಿಡ್‌ ವಾರ್ನರ್ ನಿವೃತ್ತಿಯ ನಂತರ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಸ್ಮಿತ್‌ ನಿಭಾಯಿಸಿದ್ದರು. ಇದಾಗಿ ಎರಡನೇ ಟೆಸ್ಟ್‌ನಲ್ಲಿ ಅಜೇಯ 91 ರನ್ ಗಳಿಸಿದ್ದರೂ, ನಂತರ ಅದೇ ಸ್ಥಿರತೆ ಕಾಪಾಡಲಿಲ್ಲ. ನ್ಯೂಜಿಲೆಂಡ್ ವಿರುದ್ಧ ಸರಣಿಯ ನಾಲ್ಕು ಇನಿಂಗ್ಸ್‌ಗಳಲ್ಲಿ ಅವರು ಬರೇ 51 ರನ್ ಗಳಿಸಿದ್ದರು.

ಕ್ಯಾಮೆರಾನ್ ಗ್ರೀನ್ ಅವರು ಗಾಯಾಳಾಗಿದ್ದು ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಪಡೆಯಲಿದ್ದಾರೆ. ಹೀಗಾಗಿ ಆ ಸ್ಥಾನಕ್ಕೆ ಮಾಜಿ ನಾಯಕ ಸ್ಮಿತ್‌ಗೆ ಮರಳಲು ಅವಕಾಶವಾಗಿದೆ. ಗ್ರೀನ್ ಮುಂದಿನ ಆರು ತಿಂಗಳ ಮಟ್ಟಿಗೆ ಅಲಭ್ಯರಾಗಿದ್ದಾರೆ.

ಹೊಸ ಆರಂಭಿಕನಿಗೆ ಶೋಧ:

ಸ್ಮಿತ್ ಮಧ್ಯಮ ಕ್ರಮಾಂಕದಲ್ಲಿ ಆಡುವುದರಿಂದ ಆಸ್ಟ್ರೇಲಿಯಾ ತಂಡ ಹೊಸ ಆರಂಭ ಆಟಗಾರನ ಶೋಧ ನಡೆದಿದೆ. ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ತಂಡಗಳ ನಡುವಣ ಪಂದ್ಯದ ನಂತರ ಈ ಬಗ್ಗೆ ಚಿತ್ರಣ ದೊರಕುವ ಸಾಧ್ಯತೆಯಿದೆ.

ಕ್ಯಾಮೆರಾನ್ ಬ್ಯಾಂಕ್ರಾಫ್ಟ್, ಹದಿಹರೆಯದ ಪ್ರತಿಭಾನ್ವಿತ ಆಟಗಾರ ಸ್ಯಾಮ್‌ ಕೊಂಸ್ಟಾಸ್ ಮತ್ತು ಮಾರ್ಕಸ್ ಹ್ಯಾರಿಸ್‌ ಈ ಅವಕಾಶದ ಪೈಪೋಟಿಯಲ್ಲಿದ್ದಾರೆ. ಉಸ್ಮಾನ್ ಖ್ವಾಜಾ ಸಹ ಪ್ರಯತ್ನಿಸಲಿದ್ದಾರೆ.

2018ರಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ 9 ತಿಂಗಳ ನಿಷೇಧ ಅನುಭವಿಸಿದ್ದ ಬ್ಯಾಂಕ್ರಾಫ್ಟ್‌ ಅವರು ವಾರ್ನರ್ ಸ್ಥಾನಕ್ಕೆ ಆಯ್ಕೆಯಾಗುವಂತೆ ಕಂಡಿತ್ತು. ಆದರೆ ಶೆಫೀಲ್ಡ್‌ ಶೀಲ್ಡ್ ಟೂರ್ನಿಯಲ್ಲಿ ಎರಡು ವರ್ಷಗಳಿಂದ ಯಶಸ್ಸು ಪಡೆದ ಗ್ರೀನ್‌ಗೆ ಆಯ್ಕೆಗಾರರು ಟೆಸ್ಟ್ ತಂಡದ ಆಯ್ಕೆ ವೇಳೆ ಮಣೆ ಹಾಕಿದ್ದರು.

ಶೆಫೀಲ್ಡ್‌ ಶೀಲ್ಡ್ ಪಂದ್ಯಾವಳಿಯಲ್ಲಿ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ ಸತತವಾಗಿ ಎರಡು ಶತಕ ಬಾರಿಸಿದ ನಂತರ ಕೊಂಸ್ಟಾಸ್‌ ಅವರೂ ಪರಿಗಣನೆಗೆ ಬಂದಿದ್ದಾರೆ. 17 ವರ್ಷದ ಕೊಂಸ್ಟಾಸ್ ಈಗ ಆಸ್ಟ್ರೇಲಿಯಾ ‘ಎ’ ತಂಡಕ್ಕೂ ಸ್ಥಾನ ಪಡೆದಿದ್ದಾರೆ.

ಬಾರ್ಡರ್‌– ಗಾವಸ್ಕರ್ ಟ್ರೋಫಿಗಾಗಿ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ನವೆಂಬರ್‌ 22ರಂದು ಪರ್ತ್‌ನಲ್ಲಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.