ಮುಂಬೈ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಹೆಸರು ಈ ಬಾರಿಯ ಐಪಿಎಲ್ ಬಿಡ್ಗೊಳಗಾಗುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಲ್ಲ. ಆದರೆ ಅವರ ಮಾಜಿ ಸಹೋದ್ಯೋಗಿ ಜೇಮ್ಸ್ ಆ್ಯಂಡರ್ಸನ್, ಅಮೆರಿಕದ ವೇಗದ ಬೌಲರ್ ಸೌರಭ್ ನೇತ್ರಾವಲ್ಕರ್, ಇಟಲಿಯ ವೇಗಿ ಬೌಲರ್ ಥಾಮಸ್ ಡ್ರಾಕಾ ಅವರು ಹರಾಜಿಗೆ ಲಭ್ಯವಿರುವ 1,574 ಆಟಗಾರರ ಪಟ್ಟಿಯಲ್ಲಿದ್ದಾರೆ.
ಸೌದಿ ಅರೇಬಿಯಾದ ಜೆದ್ದಾದಲ್ಲಿ ಇದೇ ತಿಂಗಳ 24 ಮತ್ತು 25ರಂದು ಮೆಗಾ ಹರಾಜು ನಡೆಯಲಿದೆ.
ಫ್ರಾಂಚೈಸಿಗಳು ತಮ್ಮ ಕಡೆಯಿಂದ ಅನಿಸಿಕೆಗಳನ್ನು ಕೊಟ್ಟ ನಂತರ, ಈ ಪಟ್ಟಿಯಲ್ಲಿರುವ ಆಟಗಾರರ ಸಂಖ್ಯೆ ಕಡಿತಗೊಳ್ಳಲಿದೆ. ಪಟ್ಟಿಯಲ್ಲಿ ಭಾರತ ತಂಡದಲ್ಲಿರುವ ಪ್ರಮುಖರಾದ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಆರ್.ಅಶ್ವಿನ್ ಮತ್ತು ಯಜುವೇಂದ್ರ ಚಾಹಲ್ ಮೊದಲಾದವರು ಇದ್ದಾರೆ. ಈ ಐದೂ ಮಂದಿ ₹2 ಕೋಟಿ ಮೂಲಬೆಲೆಯನ್ನು ಹೊಂದಿದ್ದಾರೆ.
ಕಳೆದ ನವೆಂಬರ್ನಿಂದ ಗಾಯಾಳಾಗಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಗುಜರಾತ್ ಜೈಂಟ್ಸ್ ತಂಡದಿಂದ ಮುಕ್ತಗೊಳಿಸಿದ್ದು, ಅವರೂ ₹2ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಹ ಇಷ್ಟೇ ಮೌಲ್ಯ ಹೊಂದಿದ್ದಾರೆ.
ಗರಿಷ್ಠ ₹2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರಲ್ಲಿ ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ವೆಂಕಟೇಶ ಅಯ್ಯರ್, ಆವೇಶ್ ಖಾನ್, ದೀಪಕ್ ಚಾಹರ್, ಇಶಾನ್ ಕಿಶನ್ ಮತ್ತು ಭುವನೇಶ್ವರ ಕುಮಾರ್ ಇದ್ದಾರೆ.
ಈ ಪಟ್ಟಿಯಲ್ಲಿ ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೇವದತ್ತ ಪಡಿಕ್ಕಲ್, ಕೃಣಾಲ್ ಪಾಂಡ್ಯ, ಹರ್ಷಲ್ ಪಟೇಲ್, ಪ್ರಸಿದ್ಧ ಕೃಷ್ಣ, ಟಿ.ನಟರಾಜನ್, ವಾಷಿಂಗ್ಟನ್ ಸುಂದರ್ ಮತ್ತು ಉಮೇಶ್ ಯಾದವ್ ಅವರೂ ಇದ್ದಾರೆ.
ಈ ಹಿಂದಿನ ಐಪಿಎಲ್ ಹರಾಜಿನಲ್ಲಿ ‘ಅನ್ಸೋಲ್ಡ್’ ಆಗಿದ್ದ ಸರ್ಫರಾಜ್ ಖಾನ್ ಮತ್ತು ಪೃಥ್ವಿ ಶಾ ಇಬ್ಬರೂ ತಮ್ಮನ್ನು ₹75 ಲಕ್ಷ ಮೂಲಬೆಲೆಗೆ ನೋಂದಾಯಿಸಿಕೊಂಡಿದ್ದಾರೆ.
ಕಾರ್ಯಭಾರ ಒತ್ತಡದ ಭಾಗವಾಗಿ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಸ್ಟೋಕ್ಸ್ ಅವರು 2025ರ ಆವೃತ್ತಿಯಿಂದಲೂ ಹೊರಗುಳಿದಿದ್ದಾರೆ.
ಆ್ಯಂಡರ್ಸನ್ಗೆ ಮೊದಲ ಯತ್ನ:
42 ವರ್ಷ ವಯಸ್ಸಿನ ಆ್ಯಂಡರ್ಸನ್ ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದು ಈ ಬಾರಿ ಬಿಡ್ಗೊಳಗಾವ ಆಟಗಾರರ ಯಾದಿಯಲ್ಲಿದ್ದಾರೆ. ಅವರು ಕೊನೆಯ ಬಾರಿ ಟಿ20 ಆಡಿದ್ದು 2014ರಲ್ಲಿ. ಹಿಂದೆಂದೂ ಅವರು ಪ್ರಾಂಚೈಸಿ ಟಿ20 ಲೀಗ್ನಲ್ಲಿ ಆಡಿಲ್ಲ. ಅವರ ಮೂಲಬೆಲೆ ₹1.25 ಕೋಟಿ.
ಅಮೆರಿಕ ತಂಡದ ಪರ ಟಿ20 ವಿಶ್ವಕಪ್ನಲ್ಲಿ ಮಿಂಚಿದ್ದ ಭಾರತ ಸಂಜಾತ ಸೌರಭ್ ನೇತ್ರಾವಲ್ಕರ್ ಅವರೂ ಪಟ್ಟಿಯಲ್ಲಿದ್ದಾರೆ. ಒರಾಕಲ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಅವರ ಮೂಲ ಬೆಲೆ ₹30 ಲಕ್ಷ.
ಕಳೆದ ವರ್ಷ ಅತಿ ಹೆಚ್ಚು ಮೌಲ್ಯ (₹24.50 ಕೋಟಿ) ಪಡೆದಿದ್ದ ಮಿಚೆಲ್ ಸ್ಟಾರ್ಕ್ ಅವರೂ ₹2 ಕೋಟಿ ಮೂಲಬೆಲೆ ಹೊಂದಿದ್ದಾರೆ. ಹೋದ ಸಲ ಅವರು ಕೋಲ್ಕತ್ತ ತಂಡದಲ್ಲಿದ್ದರು. ಇಂಗ್ಲೆಂಡ್ನ ವೇಗಿ ಜೋಫ್ರಾ ಆರ್ಚರ್ ಕೂಡ ಇದೇ ಮೂಲ ಬೆಲೆ ಹೊಂದಿದ್ದಾರೆ.
ಮೊದಲ ಸಲ ಇಟಲಿ ಬೌಲರ್!
ಮಧ್ಯಮ ವೇಗಿ ಥಾಮಸ್ ಡ್ರಾಕಾ ಅವರು ಐಪಿಎಲ್ ಬಿಡ್ಗೆ ನೋಂದಾಯಿಸಿಕೊಂಡ ಇಟಲಿಯ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾದರು. ಈ ವರ್ಷದ ಜೂನ್ನಲ್ಲಿ ಪದಾರ್ಪಣೆ ಮಾಡಿದ ನಂತರ 24 ವರ್ಷ ವಯಸ್ಸಿನ ಈ ವೇಗದ ಬೌಲರ್ ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದಾರೆ.
ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಅವರ ಬೌಲಿಂಗ್ ಗಮನ ಸೆಳೆದಿತ್ತು. 10.63 ಸರಾಸರಿಯಲ್ಲಿ 11 ವಿಕೆಟ್ಗಳೊಡನೆ ಜಂಟಿಯಾಗಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. 6.88ರ ಇಕಾನಮಿ ಹೊಂದಿದ್ದರು. ಡ್ರಾಕಾ ₹30 ಲಕ್ಷ ಮೂಲ ಬೆಲೆ ಹೊಂದಿದ್ದಾರೆ.
ಫ್ರ್ಯಾಂಚೈಸಿಗಳ ಪೈಕಿ ಪಂಜಾಬ್ ಕಿಂಗ್ಸ್ ₹120 ಕೋಟಿಯೊಡನೆ ಖರೀದಿಗೆ ಅತಿ ಹೆಚ್ಚು ಮೊತ್ತ ಹೊಂದಿದೆ. ಆರ್ಸಿಬಿ ಬಳಿ ₹83 ಕೋಟಿ ಮೊತ್ತ ಉಳಿದಿದೆ. ಡೆಲ್ಲಿ ಕ್ಯಾಪಿಟಲ್ಸ್ (₹73 ಕೋಟಿ) ನಂತರದ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.