ಲಂಡನ್: ಬೆನ್ ಸ್ಟೋಕ್ಸ್ ಬುಧವಾರ ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶತಕ ಬಾರಿಸಿದರು. ಅದರೊಂದಿಗೆ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಇಂಗ್ಲೆಂಡ್ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.
ದ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಟೋಕ್ಸ್ 124 ಎಸೆತಗಳಲ್ಲಿ 182 ರನ್ ಗಳಿಸಿದರು. ಅದರಲ್ಲಿ 15 ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳಿದ್ದವು. ಅವರ ಅಬ್ಬರದ ಆಟದ ಬಲದಿಂದ ತಂಡವು 48.1 ಓವರ್‌ಗಳಲ್ಲಿ 368 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಡೇವಿಡ್ ಮಲಾನ್ (96; 95ಎ) ನಾಲ್ಕು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡರು.
ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಟ್ರೆಂಟ್ ಬೌಲ್ಟ್ ಮೊದಲ ಎಸೆತದಲ್ಲಿಯೇ ಜಾನಿ ಬೆಸ್ಟೊ ವಿಕೆಟ್ ಗಳಿಸಿದರು. ಇನ್ನೊಂದು ಓವರ್‌ನಲ್ಲಿ ಜೋ ರೂಟ್ ಅವರಿಗೂ ಪೆವಿಲಿಯನ್ ಹಾದಿ ತೋರಿದರು. ಇದರಿಂದಾಗಿ ತಂಡವು 13 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.
ಆದರ ಈ ಆತಂಕವನ್ನು ಬೆನ್ ದೂರ ಮಾಡಿದರು. ಅವರು ಮತ್ತು ಮಲಾನ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 199 ರನ್ ಸೇರಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಲು ಅನುಕೂಲವಾಯಿತು. ಆದರೆ ಮಲಾನ್ ವಿಕೆಟ್ ಗಳಿಸಿದ ಬೌಲ್ಟ್ ಜೊತೆಯಾಟ ಮುರಿದರು. ನಂತರ ಬಂದ ಬ್ಯಾಟರ್‌ಗಳಲ್ಲಿ ಬಟ್ಲರ್ ಮಾತ್ರ 38 ರನ್ ಗಳಿಸಿದರು. ಉಳಿದವರು ದೊಡ್ಡ ಇನಿಂಗ್ಸ್ ಆಡಲಿಲ್ಲ. ಆದರೆ ಸ್ಟೋಕ್ಸ್ ಬೀಸಾಟಕ್ಕೆ ಬೌಲರ್‌ಗಳು ಸುಸ್ತಾದರು.
ಕಿವೀಸ್ ತಂಡ ಬೌಲ್ಟ್ ಐದು ವಿಕೆಟ್ ಗೊಂಚಲು ಗಳಿಸುವಲ್ಲಿ ಯಶಸ್ವಿಯಾದರು. ಬೆನ್ ಲಿಸ್ಟರ್ ಮೂರು ವಿಕೆಟ್ ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.