ನವದೆಹಲಿ: ಸುಮಾರು ಒಂದು ವರ್ಷದಿಂದ ಸತತವಾಗಿ ವಿಫಲರಾದ ಅಗ್ರ ಕ್ರಮಾಂಕದ ಬ್ಯಾಟರ್ ಶಫಾಲಿ ವರ್ಮಾ ಅವರನ್ನು ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಿಂದ ಕೈಬಿಡಲಾಗಿದೆ.
ಕೊನೆಯ ಆರು ಏಕದಿನ ಪಂದ್ಯಗಳಿಂದ ಶಫಾಲಿ ಅವರು 108 ರನ್‌ಗಳನ್ನಷ್ಟೇ ಗಳಿಸಿದ್ದು, 33 ಅತ್ಯಧಿಕ ಎನಿಸಿತ್ತು. ಹೀಗಾಗಿ 20 ವರ್ಷದ ಆಟಗಾರ್ತಿ ಬಿಸಿಸಿಐ ಆಯ್ಕೆಗಾರರ ಅವಕೃಪೆಗೆ ಪಾತ್ರರಾದರು.
2023ರ ಡಿಸೆಂಬರ್‌ನಲ್ಲಿ ಅವರನ್ನು ಕಳಪೆ ಫಾರ್ಮ್‌ನ ಕಾರಣ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿಯ ಮಧ್ಯದಲ್ಲೇ ತಂಡದಿಂದ ಕೈಬಿಡಲಾಗಿತ್ತು. ಜೂನ್‌ನಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಅವರು ಪುನರಾಗಮನ ಮಾಡಿದ್ದರು.
ನ್ಮೂಜಿಲೆಂಡ್ ವಿರುದ್ಧ ಕಳೆದ ತಿಂಗಳು ತವರು ಸರಣಿಯಲ್ಲಿ 2–1 ರಿಂದ ಗೆದ್ದ ತಂಡದಲ್ಲಿದ್ದ ಉಮಾ ಚೆಟ್ರಿ, ದಯಾಳನ್ ಹೇಮಲತಾ, ಶ್ರೇಯಾಂಕಾ ಪಾಟೀಲ ಮತ್ತು ಸಯಾಲಿ ಸಾತ್ಗರೆ ಅವರನ್ನೂ ಕೈಬಿಡಲಾಗಿದೆ.
ಸರಣಿಯ ಮೊದಲೆರಡು ಏಕದಿನ ಪಂದ್ಯಗಳು ಡಿಸೆಂಬರ್ 5 ಮತ್ತು 8ರಂದು ಬ್ರಿಸ್ಬೇನ್‌ನ ಆ್ಯಲನ್ ಬಾರ್ಡರ್ ಫೀಲ್ಡ್‌ನಲ್ಲಿ ನಡೆಯಲಿವೆ. ಇನ್ನೊಂದು ಪಂದ್ಯ ಪರ್ತ್‌ನ ವಾಕಾದಲ್ಲಿ ಡಿಸೆಂಬರ್ 11ರಂದು ನಡೆಯಲಿದೆ. ಇದು ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ನ ಭಾಗವಾಗಿದೆ.
ಭಾರತ ತಂಡ:
ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಸ್ಮೃತಿ ಮಂದಾನ (ಉಪ ನಾಯಕಿ), ಪ್ರಿಯಾ ಪೂನಿಯಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ದಿಯೋಲ್, ಯಷ್ಟಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ತಿತಾಸ್ ಸಾಧು, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್ ಮತ್ತು ಸೈಮಾ ಠಾಕೂರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.