ವಿಶ್ವ ಕ್ರಿಕೆಟ್ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರನ್ನು ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಟೀಂ ಇಂಡಿಯಾಗೆ ಪರಿಗಣಿಸುವುದಿಲ್ಲ ಎಂದು ಇತ್ತೀಚಿಗೆ ವರದಿಯಾಗಿದೆ. ಈ ಕುರಿತು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಸುದ್ದಿಗಳನ್ನು ನೀಡುವ 'Sportskeeda' ವೆಬ್‌ಸೈಟ್‌ನ ಅಧಿಕೃತ ಎಕ್ಸ್/ಟ್ವಿಟರ್ (@Sportskeeda) ಖಾತೆಯಲ್ಲಿ ಕೊಹ್ಲಿಯನ್ನು ಕೈಬಿಡುವ ಕುರಿತು ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಾಡ್, 'ಇದು ನಿಜವಾಗದು' ಎಂದಿದ್ದಾರೆ.
'2024ರ ಟಿ20 ವಿಶ್ವಕಪ್‌ನಲ್ಲಿ ಆಡುವ ಭಾರತದ ತಂಡದಿಂದ ವಿರಾಟ್ ಕೊಹ್ಲಿ ಅವರನ್ನು ಕೈಬಿಡಬಹುದು. ವರದಿಗಳ ಪ್ರಕಾರ, ವೆಸ್ಟ್ ಇಂಡೀಸ್‌ನ ನಿಧಾನಗತಿಯ ಪಿಚ್‌ಗಳು, ಕೊಹ್ಲಿಯ ಆಟಕ್ಕೆ ಹೊಂದುವುದಿಲ್ಲ ಮತ್ತು ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಅವರನ್ನು ಬದಿಗೊತ್ತಬಹುದು' ಎಂದು @Sportskeedaದಲ್ಲಿ ಮಾರ್ಚ್ 12ರಂದು ಪೋಸ್ಟ್ ಹಂಚಿಕೊಳ್ಳಲಾಗಿತ್ತು.
ಇದಕ್ಕೆ ಬ್ರಾಡ್ ಅವರು, 'ಇದು ನಿಜವಾಗದು. ಆಟದ ಬೆಳವಣಿಗೆ ಸಲುವಾಗಿ ಅಭಿಮಾನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಐಸಿಸಿಯು ಅಮೆರಿಕದಲ್ಲಿ ಪಂದ್ಯಗಳನ್ನು ಆಯೋಜಿಸುತ್ತಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಕೊಹ್ಲಿ, ವಿಶ್ವದ ಯಾವುದೇ ಆಟಗಾರರ ನಡುವೆ ಗಮನ ಸೆಳೆಯಬಲ್ಲ ಆಟಗಾರ. ಅವರು ತಂಡಕ್ಕೆ ಆಯ್ಕೆಯಾಗುತ್ತಾರೆ ಎಂಬ ಖಾತ್ರಿ ಇದೆ' ಎಂದಿದ್ದಾರೆ.
ಬ್ರಾಡ್ ಅವರು 2023ರ ಆ್ಯಷಸ್ ಟೆಸ್ಟ್ ಸರಣಿಯ ಬಳಿಕ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಚೊಚ್ಚಲ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ, ಭಾರತದ ಯುವರಾಜ್ ಸಿಂಗ್, ಬ್ರಾಡ್ ಹಾಕಿದ ಒಂದು ಓವರ್‌ನ ಎಲ್ಲ ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದ್ದರು. ಆಗ ಬ್ರಾಡ್, ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಒಂದು ವರ್ಷವಷ್ಟೇ ಕಳೆದಿತ್ತು. ಹೀಗಾಗಿ, ಅವರ ವೃತ್ತಿಜೀವನ ಇಲ್ಲಿಗೆ ಮುಗಿದಂತೆ ಎಂದು ಹೇಳಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಚೇತರಿಕೆಯ ಆಟವಾಡಿದ ಅವರು, ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿದರು.
ಟೆಸ್ಟ್ ಮಾದರಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ 5ನೇ ಬೌಲರ್ ಎಂಬ ಶ್ರೇಯಕ್ಕೆ ಭಾಜನರಾದರು. ಬ್ರಾಡ್ ಖಾತೆಯಲ್ಲಿ ಒಟ್ಟು 604 ಟೆಸ್ಟ್ ವಿಕೆಟ್‌ಗಳಿವೆ. ಅವರದ್ದೇ ತಂಡದ ಜೇಮ್ಸ್ ಆ್ಯಂಡರ್ಸನ್ (700) ಹೊಸತುಪಡಿಸಿದರೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕಿಂತ ಹೆಚ್ಚು ವಿಕೆಟ್ ಪಡೆದ ಮತ್ತೊಬ್ಬ ವೇಗಿ ಇಲ್ಲ.
ಏಕದಿನ ಮಾದರಿಯಲ್ಲಿ ಆಡಿರುವ 121 ಪಂದ್ಯಗಳಿಂದ 178 ವಿಕೆಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ 56 ಪಂದ್ಯಗಳಿಂದ 65 ವಿಕೆಟ್‌ಗಳನ್ನು ಬ್ರಾಡ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.