ADVERTISEMENT

ಪಂತ್ ಆರೋಗ್ಯದಲ್ಲಿ ಚೇತರಿಕೆ

ಕಾರು ಅಪಘಾತ: ಹಣೆಯ ಗಾಯಕ್ಕೆ ಪ್ಲಾಸ್ಟಿಕ್‌ ಸರ್ಜರಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 7:16 IST
Last Updated 1 ಜನವರಿ 2023, 7:16 IST
ರಿಷಭ್‌ ಪಂತ್‌
ರಿಷಭ್‌ ಪಂತ್‌   

ಡೆಹ್ರಾಡೂನ್‌, ಉತ್ತರಾಖಂಡ (‍ಪಿಟಿಐ): ಕಾರು ಅಪಘಾತದಲ್ಲಿ ಗಾಯಗೊಂಡಿರುವ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್ ಅವರ ಆರೋಗ್ಯದಲ್ಲಿ ‘ಗಣನೀಯ ಸುಧಾರಣೆ’ ಕಂಡುಬಂದಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಪಂತ್‌ ಆರೋಗ್ಯದ ಬಗ್ಗೆ ಅವರು ಚಿಕಿತ್ಸೆ ಪಡೆಯುತ್ತಿರುವ ಮ್ಯಾಕ್ಸ್‌ ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಅವರನ್ನು ಭೇಟಿಯಾದ ಕುಟುಂಬದ ಸದಸ್ಯರು ಮತ್ತು ಗೆಳೆಯರು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದಿದ್ದಾರೆ.

25 ವರ್ಷದ ಪಂತ್‌ ಅವರು ದೆಹಲಿ–ಡೆಹ್ರಾಡೂನ್‌ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದರು. ತಲೆ, ಬೆನ್ನು, ಮಂಡಿ, ಕಾಲಿಗೆ ಗಾಯಗಳಾಗಿದ್ದವು. ಅಪಘಾತದಲ್ಲಿ ಕಾರು ಸುಟ್ಟು ಹೋಗಿದ್ದರೂ, ಪಂತ್‌ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು.

ADVERTISEMENT

‘ಅವರನ್ನು ಬೇರೆ ಆಸ್ಪತ್ರೆಗೆ ದಾಖಲಿಸುವ ಯೋಚನೆ ಸದ್ಯಕ್ಕಂತೂ ಇಲ್ಲ. ಕಳೆದ ಒಂದೂವರೆ ದಿನದಲ್ಲಿ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ’ ಎಂದು ಕುಟುಂಬದ ಗೆಳೆಯರಾದ ಉಮೇಶ್‌ ಕುಮಾರ್‌ ತಿಳಿಸಿದರು.

‘ಅವರ ಹಣೆಯ ಗಾಯಕ್ಕೆ ಶುಕ್ರವಾರವೇ ಪ್ಲಾಸ್ಟಿಕ್‌ ಸರ್ಜರಿ ಮಾಡಲಾಗಿದೆ. ಶುಕ್ರವಾರ ಹೊಸದಾಗಿ ಬ್ಯಾಂಡೇಜ್‌ ಮಾಡಲಾಗಿದೆ’ ಎಂದರು.

‘ಬಿಸಿಸಿಐ ವೈದ್ಯರು ಮ್ಯಾಕ್ಸ್‌ ಆಸ್ಪತ್ರೆಯ ವೈದ್ಯರ ಜತೆ ಸಂಪರ್ಕದಲ್ಲಿದ್ದಾರೆ. ಪಂತ್‌ ಆರೋಗ್ಯದ ಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಮಂಡಿಯ ಲಿಗಮೆಂಟ್‌ ಗಾಯದ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಬೇಕೇ ಎಂಬ ಬಗ್ಗೆ ಬಿಸಿಸಿಐ ವೈದ್ಯರು ತೀರ್ಮಾನಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ನಿರ್ದೇಶಕ ಶ್ಯಾಮ್‌ ಶರ್ಮ, ಬಾಲಿವುಡ್‌ ನಟರಾದ ಅನಿಲ್‌ ಕಪೂರ್‌ ಮತ್ತು ಅನುಪಮ್‌ ಖೇರ್‌ ಅವರು ಶನಿವಾರ ಪಂತ್ ಅವರನ್ನು ಭೇಟಿಯಾದರು.

‘ಇಲ್ಲಿನ ವೈದ್ಯರು ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯಕ್ಕೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ’ ಎಂದು ಶ್ಯಾಮ್‌ ಶರ್ಮ ಮಾಧ್ಯಮದವರಿಗೆ ತಿಳಿಸಿದರು.

‘ಪಂತ್‌ ಚೆನ್ನಾಗಿಯೇ ಇದ್ದಾರೆ. ಒಬ್ಬ ಅಭಿಮಾನಿಯಾಗಿ ಅವರನ್ನು ಭೇಟಿಯಾದೆ. ಅವರು ಶೀಘ್ರದಲ್ಲೇ ಗುಣಮುಖರಾಗಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡುವಂತಾಗಲಿ’ ಎಂದು ಅನಿಲ್‌ ಕಪೂರ್‌ ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.