ADVERTISEMENT

ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧ ದೇವದತ್ತ, ಸಾಯಿ ಸುದರ್ಶನ್ ಮಿಂಚು

ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ಮುನ್ನಡೆ

ಪಿಟಿಐ
Published 1 ನವೆಂಬರ್ 2024, 13:12 IST
Last Updated 1 ನವೆಂಬರ್ 2024, 13:12 IST
ಭಾರತ ಎ ತಂಡದ ದೇವದತ್ತ ಪಡಿಕ್ಕಲ್ 
ಭಾರತ ಎ ತಂಡದ ದೇವದತ್ತ ಪಡಿಕ್ಕಲ್    

ಮೆಕೆ, ಆಸ್ಟ್ರೇಲಿಯಾ: ಕನ್ನಡಿಗ ದೇವದತ್ತ ಪಡಿಕ್ಕಲ್ ಮತ್ತು ಸಾಯಿ ಸುದರ್ಶನ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಭಾರತ ಎ ತಂಡವು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎ ಎದುರಿನ ಪಂದ್ಯದ ಎರಡನೇ ದಿನವಾದ ಶುಕ್ರವಾರ 120 ರನ್‌ಗಳ ಮುನ್ನಡೆ ಸಾಧಿಸಿದೆ. 

ಮೊದಲ ಇನಿಂಗ್ಸ್‌ನಲ್ಲಿ ಭಾರತ ಎ ತಂಡವು ಕೇವಲ 107 ರನ್‌ಗಳಿಗೆ ಅಲೌಟ್ ಆಗಿತ್ತು. ಅದಕ್ಕುತ್ತರವಾಗಿ ಆಸ್ಟ್ರೇಲಿಯಾ ಎ ತಂಡವು 62.4 ಓವರ್‌ಗಳಲ್ಲಿ 195 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಭಾರತ ಎ ತಂಡದ ಮುಕೇಶ್ ಕುಮಾರ್ (24ಕ್ಕೆ6) ಮತ್ತು ಪ್ರಸಿದ್ಧ ಕೃಷ್ಣ (59ಕ್ಕೆ3) ಅವರ ಬೌಲಿಂಗ್ ಪರಿಣಾಮಕಾರಿಯಾಗಿತ್ತು. ಆತಿಥೇಯ ತಂಡವು 88 ರನ್‌ಗಳ ಮುನ್ನಡೆ ಪಡೆಯಿತು. 

ಇದಕ್ಕುತ್ತರವಾಗಿ ಎರಡನೇ ಇನಿಂಗ್ಸ್ ನಲ್ಲಿ ಭಾರತ ಎ ತಂಡದ ಆರಂಭ ಚೆನ್ನಾಗಿರಲಿಲ್ಲ.  ಆರಂಭಿಕ ಜೋಡಿ ಋತುರಾಜ್ ಗಾಯಕವಾಡ (5 ರನ್) ಮತ್ತು ಅಭಿಮನ್ಯು ಈಶ್ವರನ್ (12 ರನ್) ಅವರು ಬೇಗನೆ ಔಟಾದರು. ಆಗ ತಂಡದ ಮೊತ್ತವು ಕೇವಲ 30 ರನ್‌ಗಳಾಗಿದ್ದವು.  ಮೊದಲ ಇನಿಂಗ್ಸ್‌ನಲ್ಲಿ ಋತುರಾಜ್ ಸೊನ್ನೆ ಸುತ್ತಿದ್ದರು. ಈಶ್ವರನ್ 7 ರನ್ ಗಳಿಸಿದ್ದರು. ಆಗ ತಂಡವು ಮೂರಂಕಿ ಮೊತ್ತ ಗಳಿಸಲು ನೆರವಾಗಿದ್ದ ಸಾಯಿ ಸುದರ್ಶನ್ ಮತ್ತು ದೇವದತ್ತ ಮತ್ತೊಮ್ಮೆ ಮಿಂಚಿದರು.  ಎರಡನೇ ಇನಿಂಗ್ಸ್‌ನಲ್ಲಿ ಅವರಿಬ್ಬರೂ ಮುರಿಯದ 3ನೇ ವಿಕೆಟ್ ಜೊತೆಯಾಟದಲ್ಲಿ 178 ರನ್ ಸೇರಿಸಿದರು.  ಇದರಿಂದಾಗಿ ದಿನದಾಟದ ಅಂತ್ಯಕ್ಕೆ ತಂಡವು 64 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 208 ರನ್ ಗಳಿಸಿತು. 

ADVERTISEMENT

ಚೆಂಡು ವೇಗವಾಗಿ ಪುಟಿದೇಳುವ ಪಿಚ್‌ನಲ್ಲಿ ಬೆಂಗಳೂರು ಹುಡುಗ ದೇವದತ್ತ ಆತ್ಮವಿಶ್ವಾಸ ಮತ್ತು ತಾಳ್ಮೆ ಮೇಳೈಸಿದ ಆಟವಾಡಿದರು. 167 ಎಸೆತಗಳಲ್ಲಿ 80 ರನ್ ಗಳಿಸಿದ್ದಾರೆ. ಅದರಲ್ಲಿ ಐದು ಬೌಂಡರಿಗಳಿವೆ. ಅವರಿಗೆ ಜೊತೆಗೂಡಿದ ಸುದರ್ಶನ್ ವೇಗವಾಗಿ ರನ್‌ ಗಳಿಸಲು ಆದ್ಯತೆ ನೀಡಿದರು. ಒಂಬತ್ತು ಬೌಂಡರಿ ಬಾರಿಸಿದರು. 185 ಎಸೆತಗಳಿಂದ 96 ರನ್‌ ಗಳಿಸಿ, ಶತಕದ ಸನಿಹ ಬಂದು ನಿಂತಿದ್ದಾರೆ. ಇಬ್ಬರೂ ಕ್ರೀಸ್‌ನಲ್ಲಿದ್ದಾರೆ. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 47.4 ಓವರ್‌ಗಳಲ್ಲಿ 107, ಆಸ್ಟ್ರೇಲಿಯಾ ಎ: 62.4 ಓವರ್‌ಗಳಲ್ಲಿ 195 (ಟಾಡ್ ಮರ್ಫಿ 33, ಮುಕೇಶ್ ಕುಮಾರ್ 46ಕ್ಕೆ6, ಪ್ರಸಿದ್ಧ ಕೃಷ್ಣ 59ಕ್ಕೆ3) ಎರಡನೇ ಇನಿಂಗ್ಸ್: ಭಾರತ ಎ: 64 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 208 (ಸಾಯಿ ಸುದರ್ಶನ್ ಬ್ಯಾಟಿಂಗ್ 96, ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ 80) 

ಸಾಯಿ ಸುದರ್ಶನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.