ನವದೆಹಲಿ: ಹಿಂದಿನ ಸಾಲಿನ ಬೆಂಚಿನಲ್ಲಿ ಕೂತು ತನ್ನ ಹಿರಿಯ ಆಟಗಾರರಿಗೆ ಕೀಟಲೆ ಮಾಡುತ್ತಿದ್ದ ಹುಡುಗ ಭಾರತದ ಫುಟ್‌ಬಾಲ್ ಕ್ಷೇತ್ರದ ದಿಗ್ಗಜನಾಗಿ ಬೆಳೆದ. ಆ ತುಂಟ ಹುಡುಗನೇ ಸುನಿಲ್ ಚೆಟ್ರಿ.
ಅಂತರರಾಷ್ಟ್ರೀಯ ಫುಟ್‌ಬಾಲ್ ಆಡಲು ಭಾರತ ತಂಡಕ್ಕೆ ಆಯ್ಕೆಯಾದಾಗಲೂ ಚೆಟ್ರಿ ತುಂಟಾಟದ ಹುಡುಗನೇ ಆಗಿದ್ದರು. ಆದರೆ 2011ರಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಲಭಿಸಿದಾಗ ಸಂಪೂರ್ಣ ಬದಲಾದರು. ಆ ಸಂದರ್ಭದಲ್ಲಿ ನಿವೃತ್ತರಾಗಿದ್ದ ದಿಗ್ಗಜ ಬೈಚುಂಗ್ ಭುಟಿಯಾ ಅವರ ಸ್ಥಾನವನ್ನು ತುಂಬುವಲ್ಲಿ ಯಶಸ್ವಿಯಾದರು.
ವೈಯಕ್ತಿಕವಾಗಿ ಸಾಧನೆಗಳ ಜೊತೆಗೆ ನಾಯಕನಾಗಿಯೂ ಯುವ ಆಟಗಾರರಿಗೆ ಉತ್ತಮ ನಿದರ್ಶನ ಹಾಕಿಕೊಟ್ಟರು.
‘ನನನಗೆ ಹೊಣೆ ನೀಡಿದ ಆ ದಿನ ಒತ್ತಡದಲ್ಲಿದ್ದೆ. ಅದು ಮಲೇಷ್ಯಾದಲ್ಲಿ ಬಾಬ್ ಹಾಟನ್ ನನ್ನ ತೋಳಿಗೆ ಪಟ್ಟಿ ಕಟ್ಟಿದ್ದರು. ನಾನು ಹಿಂಬದಿ ಬೆಂಚ್ ಹುಡುಗನಾಗಿದ್ದೆ. ಒಮ್ಮೆಲೆ ಮುಂಚೂಣಿಗೆ ಬಂದದ್ದು ಒತ್ತಡ ಮೂಡಿಸಿತ್ತು. ನಾನು ಸ್ಟಿವನ್ (ದಿಯಾಸ್) ಮತ್ತು ಪ್ರದೀಪ್ (ಎನ್‌ಪಿ) ಹಿರಿಯ ಆಟಗಾರರನ್ನು ಕೀಟಲೆ ಮಾಡುತ್ತಿದ್ದೆವು. ಯಾವಾಗ ನನಗೆ ನಾಯಕತ್ವ ಹೊಣೆ ನೀಡಲಾಯಿತೋ ಮೂರು,ನಾಲ್ಕು ಪಂದ್ಯಗಳ ನಂತರ ಮುಂದಿನ ಬೆಂಚ್‌ನಲ್ಲಿ ಕೂರಲು ಆರಂಭಿಸಿದೆ‘ ಎಂದು ಚೆಟ್ರಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ‘ಲೆಟ್ ದೇರ್ ಬಿ ಸ್ಪೋರ್ಟ್ಸ್‘ ಕಾರ್ಯಕ್ರಮದಲ್ಲಿ ಹೇಳಿದರು.
‘ಈ ಮೊದಲು ಹೆದರಿಕಯಾಗುತ್ತಿತ್ತು. ನಂತರ ಸುದಾರಿಸಿಕೊಂಡೆ, ನಿರಾಳವಾದೆ. ತಂಡವನ್ನು ಮುನ್ನಡೆಸುತ್ತ ವೈಯಕ್ತಿಕವಾಗಿಯೂ ಸಾಧನೆ ಮಾಡಬೇಕು. ಕ್ರೀಡಾಂಗಣದ ಹೊರಗೆ ಮತ್ತು ಒಳಗೆ ಉತ್ತಮ ಆಟಗಾರ, ವ್ಯಕ್ತಿಯಾಗಬೇಕು‘ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.