ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (ಆರ್‌ಸಿಬಿ) ಪರ ಆಡುವ ಮಧ್ಯಮ ವೇಗದ ಬೌಲರ್ ಕುರಿತು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರಮುಖ ಆಟಗಾರನಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿಭಾರತ ತಂಡ, ನಾಯಕ ರೋಹಿತ್ ಶರ್ಮಾ, ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಜಸ್‌ಪ್ರೀತ್ ಬೂರ್ಮಾ ಅವರಿಲ್ಲದೆ ಕಣಕ್ಕಿಳಿದಿತ್ತು. ರೋಹಿತ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ತಂಡ ಮುನ್ನಡೆಸಿದ್ದರು. ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ತಲಾ ಎರಡರಲ್ಲಿ ಗೆದ್ದು, ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಅಂತಿಮ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಬುಮ್ರಾ ಹಾಗೂ ಅನುಭವಿ ಮೊಹಮ್ಮದ್ ಶಮಿ ತಂಡದಲ್ಲಿ ಇಲ್ಲದಿದ್ದರೂ, ವೇಗಿಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ಉತ್ತಮ ಬೌಲಿಂಗ್ ಮಾಡಿದ್ದರು. ನಾಲ್ಕು ಪಂದ್ಯಗಳಲ್ಲಿ 14 ಓವರ್ ಬೌಲಿಂಗ್ ಮಾಡಿದ್ದ ಭುವನೇಶ್ವರ್,85 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದಿದ್ದರು. ಅದರೊಂದಿಗೆ, ಸರಣಿ ಶ್ರೇಷ್ಠ ಎನಿಸಿದ್ದರು.ಹರ್ಷಲ್ ಪಟೇಲ್‌ಟೂರ್ನಿಯಲ್ಲಿ ಹೆಚ್ಚು (7) ವಿಕೆಟ್ ಪಡೆದ ಬೌಲರ್ ಎನಿಸಿದ್ದರು.
ಹರ್ಷಲ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಗವಾಸ್ಕರ್, ಅವರು (ಹರ್ಷಲ್) ವಿಶ್ವಕಪ್‌ನಲ್ಲಿ ಆಡುವ ಭಾರತ ತಂಡದಲ್ಲಿರಬೇಕು ಎಂದಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಗವಾಸ್ಕರ್, 'ಭುವನೇಶ್ವರ್, ಬೂಮ್ರಾ, ಶಮಿ ತಂಡದಲ್ಲಿರುವುದರಿಂದ ಆತ (ಹರ್ಷಲ್ ಪಟೇಲ್) ಕೂಡ ಪ್ರಮುಖ ಆಟಗಾರರಲ್ಲಿ ಒಬ್ಬನಾಗಿರಲಿದ್ದಾರೆ. ಇಂತಹ ಆಟಗಾರರನ್ನು ಹೊಂದಿರುವುದು ನಾಯಕನಿಗೆ ಅತ್ಯುತ್ತಮ ಸಂಗತಿ. ಹರ್ಷಲ್, ವೇಗದ ಏರಿಳಿತಗಳೊಂದಿಗೆ ಪವರ್ ಪ್ಲೇ ಅವಧಿಯಲ್ಲಿಯೂ ಬೌಲಿಂಗ್ ಮಾಡಬಲ್ಲ. ಹಾಗಾಗಿ, ಆತ ವಿಶ್ವಕಪ್ ತಂಡದದಲ್ಲಿರಬೇಕು' ಎಂದು ಹೇಳಿದ್ದಾರೆ.
ಇದೇ ತಿಂಗಳು ಐರ್ಲೆಂಡ್‌ನಲ್ಲಿ ಆತಿಥೇಯ ತಂಡದ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟಿ20 ಸರಣಿಯಲ್ಲಿಯೂ ಹರ್ಷಲ್ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.