ADVERTISEMENT

ನಾಯಕತ್ವ ತೊರೆದ ಬಳಿಕ ಕೊಹ್ಲಿ ಯಾರಿಂದ, ಯಾವ ಸಂದೇಶ ಬಯಸಿದ್ದರು?: ಗವಾಸ್ಕರ್

ಪಿಟಿಐ
Published 6 ಸೆಪ್ಟೆಂಬರ್ 2022, 4:19 IST
Last Updated 6 ಸೆಪ್ಟೆಂಬರ್ 2022, 4:19 IST
ಸುನಿಲ್ ಗವಾಸ್ಕರ್ ಮತ್ತು ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ಸುನಿಲ್ ಗವಾಸ್ಕರ್ ಮತ್ತು ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)   

ನವದೆಹಲಿ: ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ತೊರೆದಾಗ ತಮಗೆ ಯಾವ ಆಟಗಾರ ಸಂದೇಶ ಕಳುಹಿಸಬೇಕಿತ್ತು ಹಾಗೂ ಯಾವ ರೀತಿಯ ಸಂದೇಶ ಕಳುಹಿಸಬೇಕಿತ್ತು ಎಂಬುದನ್ನು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಲಿ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್‌ ಹೇಳಿದ್ದಾರೆ.

‘ನಾನು ಟೆಸ್ಟ್‌ ನಾಯಕತ್ವ ತ್ಯಜಿಸಿದಾಗ ಒಬ್ಬ ವ್ಯಕ್ತಿ ಮಾತ್ರ ನನಗೆ ಸಂದೇಶ ಕಳುಹಿಸಿದ್ದರು. ಅದು ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್‌. ಧೋನಿ’ ಎಂದು ಭಾನುವಾರ ನಡೆದ ಟಿವಿ ಟಾಕ್‌ ಶೋದಲ್ಲಿ ಕೊಹ್ಲಿ ಹೇಳಿದ್ದರು.

ಈ ಕುರಿತು ‘ಸ್ಪೋರ್ಟ್ಸ್ ತಕ್’ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗವಾಸ್ಕರ್, ‘ವಿರಾಟ್ ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದರು ಎಂಬುದನ್ನು ಹೇಳುವುದು ಕಷ್ಟಸಾಧ್ಯ. ಕೊಹ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನಾದರೂ ಉಲ್ಲೇಖಿಸಿದ್ದರೆ ನೀವು ಅಂಥವರ ಬಳಿ ಹೋಗಿ ಪ್ರಶ್ನಿಸಬಹುದು. ಕೊಹ್ಲಿಯನ್ನು ಸಂಪರ್ಕಿಸಿದ್ದರೇ ಅಥವಾ ಇಲ್ಲವೇ ಎಂದು ಕೇಳಬಹುದು. ನನಗೆ ಗೊತ್ತಿರುವ ಮಾಹಿತಿ ಪ್ರಕಾರ, ಎಂ.ಎಸ್. ಧೋನಿ ಬಗ್ಗೆಯಷ್ಟೇ ಕೊಹ್ಲಿ ಮಾತನಾಡಿದ್ದಾರೆ’ ಎಂದಿದ್ದಾರೆ.

‘ಮಾಜಿ ಆಟಗಾರರ ಬಗ್ಗೆ ಕೊಹ್ಲಿ ಮಾತನಾಡಿದ್ದೇ ಆಗಿದ್ದಲ್ಲಿ, ಅವರ ಜತೆ ತಂಡದಲ್ಲಿದ್ದವರು ಟಿವಿ ಚರ್ಚೆಗಳಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬುದು ನಮಗೆ ತಿಳಿದಿದೆ. ಯಾರನ್ನು ಉದ್ದೇಶಿಸಿ ಆ ಹೇಳಿಕೆ ನೀಡಿದ್ದಾರೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಷ್ಟೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಏನು ಸಂದೇಶವನ್ನು ಅವರು ಬಯಸಿದ್ದರು? ಉತ್ತೇಜನದ ಮಾತುಗಳನ್ನೇ? ಹೌದಾಗಿದ್ದರೆ ಅವರು ನಾಯಕತ್ವ ತ್ಯಜಿಸಿ ಆಗಿತ್ತಲ್ಲವೇ? ಅಲ್ಲಿಗೆ ಅದು ಮುಗಿದ ಅಧ್ಯಾಯ. ಬಳಿಕ ಪ್ರೋತ್ಸಾಹದ ನುಡಿಗಳನ್ನು ಯಾಕಾಗಿ ಆಡಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸುವುದಕ್ಕಾಗಿ ನಾಯಕತ್ವ ತ್ಯಜಿಸಿರುವುದಾಗಿ ಅವರು (ಕೊಹ್ಲಿ) ಹೇಳಿದ್ದರು ಎಂದೂ ಗವಾಸ್ಕರ್ ಹೇಳಿದ್ದಾರೆ.

‘ಈಗ ನೀವು ಒಬ್ಬ ಕ್ರಿಕೆಟಿಗನಾಗಿ ಆಡುತ್ತಿದ್ದೀರಿ ಅಷ್ಟೆ. ಹೀಗಾಗಿ ನಾಯಕನಾಗಿದ್ದಾಗ ನಿರ್ವಹಿಸುವ ಪಾತ್ರದ ಬಗ್ಗೆ ಚಿಂತಿಸಬೇಕಿಲ್ಲ. ನಾಯಕನಾಗಿದ್ದಾಗ ಸಹ ಆಟಗಾರರ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಆದರೆ ನಿಮ್ಮ ನಾಯಕತ್ವ ಮುಗಿದ ಬಳಿಕ ನೀವು ನಿಮ್ಮದೇ ಆಟದ ಬಗ್ಗೆ ಗಮನಹರಿಸಬೇಕಿದೆ’ ಎಂದು ಕೊಹ್ಲಿ ಅವರನ್ನು ಉದ್ದೇಶಿಸಿ ಗವಾಸ್ಕರ್ ಹೇಳಿದ್ದಾರೆ.

‘ಹಲವು ಮಂದಿಯಲ್ಲಿ ನನ್ನ ಮೊಬೈಲ್‌ ಸಂಖ್ಯೆ ಇದೆ. ಟಿ.ವಿ ಸಂವಾದದಲ್ಲಿ ಮಾತನಾಡುವಾಗ ಅನೇಕ ಮಂದಿ ನನಗೆ ಸಲಹೆ ನೀಡುತ್ತಿರುತ್ತಾರೆ. ಧೋನಿ ಹೊರತುಪಡಿಸಿ ನನ್ನ ಮೊಬೈಲ್‌ ಸಂಖ್ಯೆ ಹೊಂದಿರುವ ಬೇರೆ ಯಾರಿಂದಲೂ ನಾಯಕತ್ವ ತೊರೆದ ಸಮಯದಲ್ಲಿ ಸಂದೇಶ ಬಂದಿರಲಿಲ್ಲ. ನಾನು ಯಾರಿಗಾದರೂ ಏನನ್ನಾದರೂ ಹೇಳಲು, ಸಲಹೆ ನೀಡಲು ಬಯಸಿದರೆ, ವೈಯಕ್ತಿಕವಾಗಿ ಅವರನ್ನು ಸಂಪರ್ಕಿಸುತ್ತೇನೆ. ಟಿ.ವಿಯಲ್ಲಿ ಬಂದು ಇಡೀ ಜಗತ್ತು ನೋಡುವಂತೆ ಸಲಹೆಗಳನ್ನು ನೀಡಿದರೆ ಅದಕ್ಕೆ ನಾನು ಯಾವುದೇ ಬೆಲೆ ಕೊಡುವುದಿಲ್ಲ. ನನ್ನ ಆಟದಲ್ಲಿ ಸುಧಾರಣೆ ತರಲು ಏನಾದರೂ ಸಲಹೆ ನೀಡುವುದಾದರೆ ನೇರವಾಗಿ ಸಂಪರ್ಕಿಸಿ’ ಎಂದು ಕೊಹ್ಲಿ ಹೇಳಿದ್ದರು.

‘ಮಾಜಿ ಆಟಗಾರರು ನನ್ನ ಬಗ್ಗೆ ಹಲವು ಅಭಿಪ್ರಾಯಗಳನ್ನು ಹೇಳುತ್ತಾರೆ. ಅದಕ್ಕೆ ಆಭ್ಯಂತರವಿಲ್ಲ. ಆದರೆ ಅಂತಹ ಅಭಿಪ್ರಾಯಗಳು ವೈಯಕ್ತಿಕವಾಗಿ ನನ್ನ ಮೇಲೆ ಯಾವುದೇ ಪರಿಣಾಮ ಬೀರದು’ ಎಂದು ಸ್ಪಷ್ಟಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.