ಸೆಂಚುರಿಯನ್: ಸೆಂಚುರಿಯನ್‌ನಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು.
ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬದಲು ಕಣಕ್ಕಿಳಿದಿದ್ದ ತಿಲಕ್ ವರ್ಮಾ ಶತಕ ಸಿಡಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.
ಈಗ ಇದರ ಹಿಂದಿನ ರಹಸ್ಯವನ್ನು ಯುವ ಪ್ರತಿಭಾವಂತ ಎಡಗೈ ಬ್ಯಾಟರ್ ತಿಲಕ್ ವರ್ಮಾ ಬಹಿರಂಗಪಡಿಸಿದ್ದಾರೆ.
'ಮೂರನೇ ಟಿ20 ಪಂದ್ಯಕ್ಕೂ ಮುನ್ನ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡುವಂತೆ ನಾಯಕ ಸೂರ್ಯ ಅವರನ್ನು ಕೋರಿದ್ದೆ. ನನ್ನ ಮೇಲೆ ನಾಯಕ ಇಟ್ಟಿರುವ ನಂಬಿಕೆಯನ್ನು ಈಗ ಹಿಂದಿರುಗಿಸಬೇಕಿದೆ' ಎಂದು ಅವರು ಹೇಳಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ವರ್ಮಾ, ಅನುಕ್ರಮವಾಗಿ 33 ಹಾಗ 20 ರನ್ ಗಳಿಸಿ ಔಟ್ ಆಗಿದ್ದರು.
'ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾನು ಇಷ್ಟಪಡುತ್ತೇನೆ. ಮೊದಲೆರಡು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದೆ. ಆದರೆ ಪಂದ್ಯದ ಹಿಂದಿನ ದಿನ ಸೂರ್ಯ ನನ್ನ ಕೊಠಡಿಗೆ ಬಂದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಂತೆ ಸೂಚಿಸಿದರು. ಈ ಉತ್ತಮ ಅವಕಾಶವನ್ನು ಸದುಪಯೋಗಪಡಿಸುವಂತೆ ಸಲಹೆ ನೀಡಿದರು' ಎಂದು ತಿಲಕ್ ತಿಳಿಸಿದರು.
ನೀವು ನನಗೆ ಅವಕಾಶ ನೀಡಿದ್ದೀರಿ. ನಾನು ಮೈದಾನದಲ್ಲಿ ಉತ್ತಮ ಪ್ರದರ್ಶನದ ಮೂಲಕ ಉತ್ತರಿಸುವೆ ಎಂದು ಸೂರ್ಯ ಅವರಿಗೆ ತಿಳಿಸಿರುವುದಾಗಿ ತಿಲಕ್ ಹೇಳಿದರು.
ಈ ಮೊದಲು ಮೂರನೇ ಕ್ರಮಾಂಕದಲ್ಲಿ ಆಡಲು ತಿಲಕ್ ವರ್ಮಾ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದರು ಎಂದು ಸೂರ್ಯ ಕುಮಾರ್ ಯಾದವ್ ಹೇಳಿದ್ದರು.
51 ಎಸೆತಗಳಲ್ಲಿ ಚೊಚ್ಚಲ ಶತಕ ಗಳಿಸಿದ ತಿಲಕ್ ವರ್ಮಾ, ಅಂತಿಮವಾಗಿ 56 ಎಸೆತಗಳಲ್ಲಿ 107 ರನ್ ಗಳಿಸಿ ಅಜೇಯರಾಗುಳಿದರು. ಅವರ ಇನಿಂಗ್ಸ್‌ನಲ್ಲಿ ಏಳು ಸಿಕ್ಸರ್ ಹಾಗೂ ಎಂಟು ಬೌಂಡರಿಗಳು ಸೇರಿದ್ದವು. ಈ ಪಂದ್ಯವನ್ನು 11 ರನ್ ಅಂತರದಿಂದ ಗೆದ್ದಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.