ದುಬೈ: ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಬುಧವಾರ ಬಿಡುಗಡೆಯಾದ ಐಸಿಸಿ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ 6ನೇ ಸ್ಥಾನಕ್ಕೆ ಏರಿದ್ದಾರೆ.
ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಒಟ್ಟು 141 ರನ್ ಗಳಿಸಿ ಮಿಂಚಿದ್ದ ಜೈಸ್ವಾಲ್ (743 ಅಂಕ) ಅವರಿಗೆ ನಾಲ್ಕು ಸ್ಥಾನಗಳ ಬಡ್ತಿ ದೊರಕಿದೆ.
ಸೂರ್ಯಕುಮಾರ್ ಯಾದವ್ (797 ಅಂಕ) ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ (844) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯನ್ನು ಭಾರತ 4–1ರಿಂದ ಗೆದ್ದುಕೊಂಡಿತ್ತು. ಈ ಸರಣಿಯ ಬಳಿಕ ರ‍್ಯಾಂಕಿಂಗ್ ಪಟ್ಟಿಯನ್ನು ನವೀಕರಿಸಲಾಗಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಶುಭಮನ್ ಗಿಲ್ ಅವರು 36 ಸ್ಥಾನಗಳ ಬಡ್ತಿಯೊಂದಿಗೆ 37ನೇ ಸ್ಥಾನಕ್ಕೆ ಏರಿದ್ದಾರೆ. ಆದರೆ, 9ನೇ ಸ್ಥಾನದಲ್ಲಿದ್ದ ಋತುರಾಜ್ ಗಾಯಕವಾಡ್ 8ನೇ ಸ್ಥಾನಕ್ಕೆ ಜಾರಿದ್ದಾರೆ.
ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 10ರೊಳಗೆ ಭಾರತದ ಯಾವುದೇ ಆಟಗಾರರು ಸ್ಥಾನ ಪಡೆದಿಲ್ಲ. ಜಿಂಬಾಬ್ವೆ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿದ್ದ ಅಕ್ಷರ್ ಪಟೇಲ್ ನಾಲ್ಕು ಸ್ಥಾನ ಕುಸಿದು, 13ನೇ ಸ್ಥಾನದಲ್ಲಿದ್ದಾರೆ.
ಜಿಂಬಾಬ್ವೆ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದ ವೇಗಿ ಮುಕೇಶ್ ಕುಮಾರ್ 36 ಸ್ಥಾನಗಳ ಬಡ್ತಿಯೊಂದಿಗೆ 46ನೇ ಸ್ಥಾನಕ್ಕೆ ತಲುಪಿದ್ದಾರೆ. ಐದು ಪಂದ್ಯಗಳಲ್ಲಿ ಎಂಟು ವಿಕೆಟ್ ಕಬಳಿಸಿರುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 21 ಸ್ಥಾನ ಮೇಲೇರಿ 73ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್‌ನ ಆದಿಲ್ ರಶೀದ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಆ್ಯನ್ರಿಚ್ ನಾರ್ಟ್ಜೆ ಮತ್ತು ಶ್ರೀಲಂಕಾದ ವನಿಂದು ಹಸರಂಗಾ ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಲ್ಕು ಸ್ಥಾನ ಹಿಂಬಡ್ತಿ ಪಡೆದು ಆರನೇ ಸ್ಥಾನಕ್ಕೆ ಕುಸಿದರೆ, ಅಕ್ಷರ್ 13ನೇ ಸ್ಥಾನದಲ್ಲಿದ್ದಾರೆ. ಹಸರಂಗಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.