ದುಬೈ: ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಬ್ಯಾಟರ್‌ಗಳ ವಿಭಾಗದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಭಾರತದ ಇನ್ನೊಬ್ಬ ಆಟಗಾರ ಋತುರಾಜ್ ಗಾಯಕವಾಡ ಅವರು ಮೊದಲ ಬಾರಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನದಲ್ಲಿದ್ದಾರೆ. ಹೆಡ್ 844 ಪಾಯಿಂಟ್ಸ್ ಸಂಗ್ರಹಿಸಿದ್ದರೆ, ಸೂರ್ಯಕುಮಾರ್ 821 ಪಾಯಿಂಟ್ಸ್ ಹೊಂದಿದ್ದಾರೆ. ಇಂಗ್ಲೆಂಡ್‌ನ ಫಿಲ್ ಸಾಲ್ಟ್ (797), ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ (755), ಮೊಹಮ್ಮದ್ ರಿಜ್ವಾನ್ (746) ಕ್ರಮವಾಗಿ ಮೂರರಿಂದ ಐದವರೆಗಿನ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜೋಸ್ ಬಟ್ಲರ್ (716) ಆರನೇ ಸ್ಥಾನ ಗಳಿಸಿದ್ದಾರೆ.
ಜಿಂಬಾಬ್ವೆ ವಿರುದ್ಧ ಹಾಲಿ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಋತುರಾಜ್ ಗಾಯಕವಾಡ ಅವರು 13 ಸ್ಥಾನಗಳಷ್ಟು ಬಡ್ತಿ ಪಡೆದು ಏಳನೇ ಸ್ಥಾನದಲ್ಲಿದ್ದಾರೆ.
ಅಕ್ಷರ್‌ಗೆ ಹಿಂಬಡ್ತಿ: ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಬೌಲರ್‌ಗಳ ವಿಭಾಗದಲ್ಲಿ ಹಿಂಬಡ್ತಿ ಪಡೆದರೂ ‘ಟಾಪ್ ಟೆನ್’ನಲ್ಲಿ ಉಳಿದುಕೊಂಡಿರುವ ಭಾರತದ ಏಕೈಕ ಬೌಲರ್ ಎನಿಸಿದ್ದಾರೆ. ಅವರು ಎರಡು ಸ್ಥಾನ ಕೆಳಗಿಳಿದು ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಕುಲದೀಪ್ ಯಾದವ್ ಕೂಡ ಮೂರು ಸ್ಥಾನಗಳಷ್ಟು ಕೆಳಗಿಳಿದಿದ್ದು, 11ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್‌ನ ಅದಿಲ್ ರಶೀದ್, ದಕ್ಷಿಣ ಆಫ್ರಿಕಾದ ಎನ್ರಿಚ್ ನಾಕಿಯಾ, ಶ್ರೀಲಂಕಾದ ವನಿಂದು ಹಸರಂಗ, ಅಫ್ಗಾನಿಸ್ತಾನದ ರಶೀದ್ ಖಾನ್ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮೊದಲ ಐದು ಸ್ಥಾನದಲ್ಲಿದ್ದಾರೆ.
ಹಾರ್ದಿಕ್‌ಗೆ 2ನೇ ಸ್ಥಾನ: ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಟಿ20 ಆಲ್‌ರೌಂಡರ್‌ಗಳ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ಅಗ್ರಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಸ್ಟೊಯಿನಿಸ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ವಾಷಿಂಗ್ಟನ್ ಸುಂದರ್ ಮೊದಲ ಬಾರಿ ಅಗ್ರ 50ರೊಳಗೆ ಸ್ಥಾನ ಪಡೆದಿದ್ದು 27ನೇ ಕ್ರಮಾಂಕ ಹೊಂದಿದ್ದಾರೆ. ಅಕ್ಷರ್ ಪಟೇಲ್ 12ನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.