ADVERTISEMENT

T20 Cricket: ಕೊಹ್ಲಿ ದಾಖಲೆಯನ್ನು 69ನೇ ಪಂದ್ಯದಲ್ಲೇ ಸರಿಗಟ್ಟಿದ ಸೂರ್ಯಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2024, 3:27 IST
Last Updated 28 ಜುಲೈ 2024, 3:27 IST
<div class="paragraphs"><p>ಸೂರ್ಯಕುಮಾರ್‌ ಯಾದವ್‌</p></div>

ಸೂರ್ಯಕುಮಾರ್‌ ಯಾದವ್‌

   

ಪಿಟಿಐ ಚಿತ್ರ

ಪೆಲೆಕೆಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 43 ರನ್‌ ಅಂತರದ ಜಯ ಸಾಧಿಸಿದೆ.

ADVERTISEMENT

ಪೆಲೆಕೆಲೆಯಲ್ಲಿ ನಡೆದ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಮಿಂಚಿದ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆ ಮೂಲಕ ಅವರು ಈ ಮಾದರಿಯಲ್ಲಿ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರ ಎಂಬ ದಾಖಲೆಯನ್ನು ದಿಗ್ಗಜ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರೊಂದಿಗೆ ಹಂಚಿಕೊಂಡರು.

ಸೂರ್ಯಕುಮಾರ್‌ ಹಾಗೂ ಕೊಹ್ಲಿ ತಲಾ 16 ಸಲ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಜಿಂಬಾಬ್ವೆಯ ಸಿಕಂದರ್ ರಾಜಾ, ಅಫ್ಗಾನಿಸ್ತಾನದ ಮೊಹಮ್ಮದ್‌ ನಬಿ, ಭಾರತದ ರೋಹಿತ್‌ ಶರ್ಮಾ, ಮಲೇಷ್ಯಾ ಆಟಗಾರ ವೀರಂದೀಪ್‌ ಸಿಂಗ್‌ ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ವಿಶೇಷವೆಂದರೆ, ಹೆಚ್ಚು ಸಲ ಪಂದ್ಯಶ್ರೇಷ್ಠ ಎನಿಸಿದ ಅಗ್ರ ಐವರ ಪಟ್ಟಿಯಲ್ಲಿರುವವರ ಪೈಕಿ 70ಕ್ಕಿಂತ ಕಡಿಮೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವುದು ಸೂರ್ಯ ಮಾತ್ರ. ಅವರು ಇದುವರೆಗೆ 69 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.

ಹೆಚ್ಚು ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರು

ಭಾರತಕ್ಕೆ ಜಯ
ಸೂರ್ಯಕುಮಾರ್ ಯಾದವ್ ಅವರು ಈ ಮಾದರಿಯಲ್ಲಿ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ಆಡುತ್ತಿರುವ ಮೊದಲ ಟಿ20 ಸರಣಿ ಇದಾಗಿದೆ.

ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 213 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತ್ತು.

ಸೂರ್ಯ ಕೇವಲ 26 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ 58 ರನ್ ಚಚ್ಚಿದರು. ವಿಕೆಟ್‌ ಕೀಪರ್ ರಿಷಭ್ ಪಂತ್ (49), ಯಶಸ್ವಿ ಜೈಸ್ವಾಲ್‌ (40) ಸಹ ಉಪಯುಕ್ತ ಆಟವಾಡಿದರು.

ಬಳಿಕ ಈ ಗುರಿ ಬೆನ್ನತ್ತಿದ ಶ್ರೀಲಂಕಾ, 19.2 ಓವರ್‌ಗಳಲ್ಲಿ 170 ರನ್‌ ಗಳಿಸಿ ಆಲೌಟ್‌ ಆಯಿತು.

ಆರಂಭಿಕ ಬ್ಯಾಟರ್‌ಗಳಾದ ಪಾಥುಮ್‌ ನಿಸಾಂಕ (79 ರನ್‌) ಮತ್ತು ಕುಶಲ್ ಮೆಂಡಿಸ್‌ (45 ರನ್‌) ಉತ್ತಮ ಆರಂಭ ನೀಡಿದರೂ, ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಬರಲಿಲ್ಲ.

ಯುವ ಆಲ್‌ರೌಂಡರ್‌ ರಿಯಾನ್ ಪರಾಗ್ 5 ರನ್‌ ನೀಡಿ 3 ವಿಕೆಟ್‌ ಪಡೆದು ಮಿಂಚಿದರು. ಅರ್ಷದೀಪ್‌ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್‌ ಉರುಳಿಸಿ ಲಂಕಾ ಕುಸಿತಕ್ಕೆ ಕಾರಣರಾದರು.

2ನೇ ಪಂದ್ಯವೂ ಇದೇ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.