ADVERTISEMENT

ಈ ಭಾರತೀಯ ಬ್ಯಾಟರ್‌ನನ್ನು ಕರೆಸುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದ ಮ್ಯಾಕ್ಸ್‌ವೆಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2022, 10:44 IST
Last Updated 23 ನವೆಂಬರ್ 2022, 10:44 IST
ಗ್ಲೆನ್‌ ಮ್ಯಾಕ್ಸ್‌ವೆಲ್‌ (ಪಿಟಿಐ ಚಿತ್ರ)
ಗ್ಲೆನ್‌ ಮ್ಯಾಕ್ಸ್‌ವೆಲ್‌ (ಪಿಟಿಐ ಚಿತ್ರ)   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಸ್ಪೋಟಕ ಆಟಗಾರ, ಟಿ–20 ಕ್ರಿಕೆಟ್‌ನ ನಂಬರ್‌ 1 ಬ್ಯಾಟರ್ ಸೂರ್ಯಕುಮಾರ್‌ ಯಾದವ್‌ ಅವರನ್ನು ಬಿಗ್‌ ಬ್ಯಾಶ್‌ (ಆಸ್ಟ್ರೇಲಿಯಾದ ಐಪಿಎಲ್‌ ಮಾದರಿಯ ಪಂದ್ಯಕೂಟ) ಟೂರ್ನಿಗೆ ಕರೆಸುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟರ್ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹೇಳಿದ್ದಾರೆ.

ಕ್ರಿಕೆಟ್‌ ಸುದ್ದಿ ಸಂಸ್ಥೆಯೊಂದಕ್ಕೆ ಮ್ಯಾಕ್ಸ್‌ವೆಲ್‌ ನೀಡಿದ ಸಂದರ್ಶನವನ್ನು ಉಲ್ಲೇಖಿಸಿ ಎನ್‌ಡಿಟಿವಿ ಈ ವರದಿ ಮಾಡಿದೆ.

ಭವಿಷ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರು ಬಿಗ್‌ ಬ್ಯಾಶ್ ಟೂರ್ನಿಯ ಒಪ್ಪಂದಕ್ಕೆ ಸಹಿ ಹಾಕಿದರೆ? ಎನ್ನುವ ತಮಾಷೆಯ ಪ್ರಶ್ನೆಗೆ ಉತ್ತರಿಸಿದ ಮ್ಯಾಕ್ಸ್‌ವೆಲ್‌, ‘ನಮ್ಮ ಬಳಿ ಬೇಕಾದಷ್ಟು ಹಣ ಇಲ್ಲ. ಅವು ಬಿಗ್‌ ಬ್ಯಾಶ್‌ಗೆ ಬರಲು ಸಾಧ್ಯವೇ ಇಲ್ಲ. ಅವರನ್ನು ಸೇರಿಸುವುದಾದರೆ ನಾವು ಪ್ರತೀ ಆಟಗಾರರ ಒಪ್ಪಂದವನ್ನು ರದ್ದು ಮಾಡಬೇಕಾಗುತ್ತದೆ‘ ಎಂದು ಹೇಳಿದ್ದಾರೆ.

ADVERTISEMENT

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ–20 ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ ಕೇವಲ 51 ಎಸೆತಗಳಲ್ಲಿ 111 ರನ್ ಸಿಡಿಸಿದ್ದರು. ಈ ಇನ್ನಿಂಗ್ಸ್ ಅನ್ನು ಉಲ್ಲೇಖಿಸಿ ಮ್ಯಾಕ್ಸ್‌ವೆಲ್‌ ಹೀಗೆ ಹೇಳಿದ್ದಾರೆ.

‘ಇಲ್ಲಿ ಏನು ನಡೆಯುತ್ತಿದೆ? ಯಾದವ್‌ ಬೇರೆಯದ್ದೇ ಗ್ರಹದಲ್ಲಿ ಬ್ಯಾಟ್‌ ಮಾಡುತ್ತಿದ್ದಾರೆ. ಉಳಿದ ಎಲ್ಲಾ ಆಟಗಾರರ ಸ್ಕೋರ್‌ ನೋಡಿ. ಈ ವ್ಯಕ್ತಿಯ ಸ್ಕೋರ್‌ ನೋಡಿ‘ ಎಂದು ತಾನು ಆರನ್‌ ಫಿಂಚ್‌ ಅವರಿಗೆ ಪಂದ್ಯದ ಸ್ಕೋರ್‌ ಕಾರ್ಡ್‌ ಕಳಿಸಿ ಹೇಳಿದ್ದಾಗಿ ಮ್ಯಾಕ್ಸ್‌ವೆಲ್‌ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.