ADVERTISEMENT

IND vs SA: ರೋಹಿತ್ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2023, 10:27 IST
Last Updated 15 ಡಿಸೆಂಬರ್ 2023, 10:27 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

(ರಾಯಿಟರ್ಸ್ ಚಿತ್ರ)

ಜೋಹಾನ್ಸ್‌ಬರ್ಗ್: ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಸೂರ್ಯಕುಮಾರ್ ಯಾದವ್, ನಾಲ್ಕನೇ ಶತಕದ ಸಾಧನೆ ಮಾಡಿದ್ದಾರೆ.

ADVERTISEMENT

ಆ ಮೂಲಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಸೂರ್ಯಕುಮಾರ್ ಅವರ ಅಮೋಘ ಶತಕದ ನೆರವಿನಿಂದ ಭಾರತ ತಂಡವು, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ 106 ರನ್ ಅಂತರದ ಭರ್ಜರಿ ಜಯ ಗಳಿಸಿತು. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಎರಡನೇ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿತ್ತು.

ಸೂರ್ಯಕುಮಾರ್ ಯಾದವ್

ರೋಹಿತ್ ಸಾಲಿಗೆ ಸೂರ್ಯ...

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸಿರುವ ಸೂರ್ಯಕುಮಾರ್ ಯಾದವ್ ಅಂತಿಮ ಪಂದ್ಯದಲ್ಲಿ ಕೇವಲ 55 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಆ ಮೂಲಕ ಭಾರತದವರೇ ಆದ ರೋಹಿತ್ ಶರ್ಮಾ ದಾಖಲೆಯನ್ನುಸರಿಗಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್ 56 ಎಸೆತಗಳಲ್ಲಿ 100 ರನ್ (8 ಸಿಕ್ಸರ್, 7 ಬೌಂಡರಿ) ಗಳಿಸಿ ಔಟ್ ಆದರು.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿ:

  • ರೋಹಿತ್ ಶರ್ಮಾ: 4

  • ಗ್ಲೆನ್ ಮ್ಯಾಕ್ಸ್‌ವೆಲ್: 4

  • ಸೂರ್ಯಕುಮಾರ್ ಯಾದವ್: 4

  • ಬಾಬರ್ ಆಜಂ: 3

  • ಕಾಲಿನ್ ಮುನ್ರೊ: 3

ಕಳೆದ ಎರಡು ವರ್ಷಗಳಲ್ಲಿ ನಾಲ್ಕು ವಿಭಿನ್ನ ದೇಶಗಳಲ್ಲಿ (ಇಂಗ್ಲೆಂಡ್, ನ್ಯೂಜಿಲೆಂಡ್, ಭಾರತ, ದಕ್ಷಿಣ ಆಫ್ರಿಕಾ) ಸೂರ್ಯಕುಮಾರ್ ಈ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.

ವಿರಾಟ್ ಮೀರಿ ನಿಂತ ಸೂರ್ಯ...

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಭಾರತೀಯ ಬ್ಯಾಟರ್‌ಗಳ ಪೈಕಿ ವಿರಾಟ್ ಕೊಹ್ಲಿ ಸಾಧನೆಯನ್ನೂ ಸೂರ್ಯಕುಮಾರ್ ಮೀರಿಸಿದ್ದಾರೆ.

ಸೂರ್ಯಕುಮಾರ್ 123 ಹಾಗೂ ವಿರಾಟ್ ಕೊಹ್ಲಿ 117 ಸಿಕ್ಸರ್ ಗಳಿಸಿದ್ದಾರೆ. ಭಾರತೀಯ ಬ್ಯಾಟರ್‌ಗಳ ಪೈಕಿ ರೋಹಿತ್ ಶರ್ಮಾ (182) ಮುಂಚೂಣಿಯಲ್ಲಿದ್ದಾರೆ.

ಕುಲದೀಪ್ ಜೀವನಶ್ರೇಷ್ಠ ಸಾಧನೆ...

ಜನ್ಮದಿನದಂದೇ ಜೀವನಶ್ರೇಷ್ಠ ಪ್ರದರ್ಶನ ನೀಡಿದ ಕುಲದೀಪ್ ಯಾದವ್ 17 ರನ್ ತೆತ್ತು ಐದು ವಿಕೆಟ್ ಗಳಿಸಿ ಮಿಂಚಿದರು. ಆ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದರು.

ರವೀಂದ್ರ ಜಡೇಜ ಅವರೊಂದಿಗೆ ಕುಲದೀಪ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.