ADVERTISEMENT

ಟಿ20 ರ‍್ಯಾಂಕಿಂಗ್‌: ರಿಜ್ವಾನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಸೂರ್ಯಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2022, 9:12 IST
Last Updated 2 ನವೆಂಬರ್ 2022, 9:12 IST
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್   

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಬಿಡುಗಡೆ ಮಾಡಿರುವ ನೂತನ ಟಿ20 ರ‍್ಯಾಂಕಿಂಗ್‌ ಪಟ್ಟಿ‌ಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಆಗ್ರಸ್ಥಾನ ಪಡೆದಿದ್ದಾರೆ.

ಸೂರ್ಯಕುಮಾರ್ ಬಳಿ 836 ಪಾಯಿಂಟ್‌ಗಳಿವೆ. ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಅರ್ಧಶತಕಗಳನ್ನು ಸಿಡಿಸಿ ಗಮನ‌ ಸೆಳೆದಿದ್ದಾರೆ. ಇದರೊಂದಿಗೆ ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕಿದ್ದಾರೆ.

ಈಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 68 ರನ್ ಗಳಿಸಿದ್ದ ಸೂರ್ಯ, ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು.

ADVERTISEMENT

ಟೀಮ್‌ ಇಂಡಿಯಾದ ಮತ್ತೊಬ್ಬ ಆಟಗಾರ ವಿರಾಟ್ ಕೊಹ್ಲಿ ಅವರು 638 ಪಾಯಿಂಟ್ಸ್‌ಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಕೂಡ ರ‍್ಯಾಂಕಿಂಗ್ಸ್‌ನಲ್ಲಿ ಮೇಲಕ್ಕೇರಿದ್ದಾರೆ. ಶ್ರೀಲಂಕಾ ವಿರುದ್ಧ 104 ಮತ್ತು ಇಂಗ್ಲೆಂಡ್ ವಿರುದ್ಧ 62 ರನ್ ಗಳಿಸಿದ್ದ ಅವರು ಏಳನೇ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧ109 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್ ರಿಲೀ ರೋಸೊ ಅಗ್ರ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.