ADVERTISEMENT

ರಿಷಭ್ ಪಂತ್ ಮೊಣಕಾಲಿನಲ್ಲಿ ಊತ: ರೋಹಿತ್ ಶರ್ಮಾ ಹೇಳಿದ್ದಿಷ್ಟು..

ಪಿಟಿಐ
Published 17 ಅಕ್ಟೋಬರ್ 2024, 14:25 IST
Last Updated 17 ಅಕ್ಟೋಬರ್ 2024, 14:25 IST
ಭಾರತ ತಂಡದ ರಿಷಭ್ ಪಂತ್
ಭಾರತ ತಂಡದ ರಿಷಭ್ ಪಂತ್   

ಬೆಂಗಳೂರು: ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ತಂಡದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಮೊಣಕಾಲಿಗೆ ಚೆಂಡು ಬಡಿದು ಊತ ಕಾಣಿಸಿಕೊಂಡಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ರವೀಂದ್ರ ಜಡೇಜ ಬೌಲ್ ಮಾಡಿದ ಚೆಂಡು ಸ್ಪಿನ್ ಆಗಿ ಪುಟಿದು ಬಂದಿತ್ತು. ಅದನ್ನು ಹಿಡಿಯುವಲ್ಲಿ ವಿಫಲವಾದ ಪಂತ್ ಅವರ ಮೊಣಕಾಲಿಗೆ ಚೆಂಡು ಬಡಿದಿದೆ.

ಕೂಡಲೇ ಅವರು ಮೈದಾನದಿಂದ ಹೊರ ಹೋಗಿದ್ದು, ಧ್ರುವ್ ಜುರೇಲ್ ಅವರು ವಿಕೆಟ್ ಕೀಪಿಂಗ್ ಹೊಣೆ ಹೊತ್ತುಕೊಂಡರು.

ADVERTISEMENT

ಚೆಂಡು ಪಂತ್ ಅವರ ಎಡಗಾಲಿನ ಮೊಣಕಾಲಿನ ಚಿಪ್ಪಿಗೆ ಬಡಿದಿದೆ. ಈ ಹಿಂದೆ 2022ರಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್ ಅವರ ಎಡಗಾಲಿಗೆ ಹಲವು ಶಸ್ತ್ರಚಿಕಿತ್ಸೆಗಳು ಆಗಿದ್ದವು. ಅದೇ ಕಾಲಿನ ಮೊಣಕಾಲಿಗೆ ಈಗ ಪೆಟ್ಟಾಗಿರುವುದು ಆತಂಕ ಮೂಡಿಸಿದೆ.

‘ದುರದೃಷ್ಟವಶಾತ್ ಚೆಂಡು ನೇರವಾಗಿ ಶಸ್ತ್ರಚಿಕಿತ್ಸೆ ಆಗಿದ್ದ ಮೊಣಕಾಲಿನ ಚಿಪ್ಪಿಗೆ ಬಡಿದಿದೆ. ಹಾಗಾಗಿ, ಕಾಲಿನಲ್ಲಿ ಊತ ಕಾಣಿಸಿಕೊಂಡಿದೆ’ಎಂದು ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಹೇಳಿದ್ದಾರೆ.

ಆದರೆ, ಪಂತ್‌ ಫಿಟ್ನೆಸ್ ಕುರಿತಂತೆ ಯಾವುದೇ ಆತಂಕ ಬೇಡ ಎಂದಿರುವ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಡ್ರೆಸ್ಸಿಂಗ್ ರೂಮ್‌ಗೆ ಮರಳಿದರು ಎಂದು ಹೇಳಿದ್ದಾರೆ.

‘ಚೆಂಡು ಬಡಿದ ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಡ್ರೆಸಿಂಗ್ ರೂಮಿಗೆ ಕರೆಸಲಾಯಿತು. ರಿಷಭ್ ಅವರ ಅದೇ ಕಾಲಿಗೆ ದೊಡ್ಡ ಶಸ್ತ್ರಚಿಕಿತ್ಸೆ ಆಗಿರುವುದರಿಂದ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಆ ನಿರ್ಧಾರ ಕೈಗೊಂಡೆವು’ಎಂದಿದ್ದಾರೆ.

ಇಂದು ರಾತ್ರಿ ಅವರು ಚೇತರಿಸಿಕೊಳ್ಳಬಹುದು ಮತ್ತು ನಾವು ಅವರನ್ನು ನಾಳೆ ಮೈದಾನದಲ್ಲಿ ನೋಡುವ ನಿರೀಕ್ಷೆ ಇದೆ ಎಂದು ರೋಹಿತ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಆಗಿತ್ತು. ರಿಷಭ್ ಪಂತ್ 20 ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.