ವಿಶಾಖಪಟ್ಟಣ: ಇಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಪ್ರವೇಶಿಸುವ ತುದಿಗಾಲಿನಲ್ಲಿ ನಿಂತಿರುವ ಕರ್ನಾಟಕ ತಂಡವು ಶುಕ್ರವಾರ ಬಿಹಾರ ತಂಡವನ್ನು ಎದುರಿಸಲಿದೆ.
‘ಎ’ ಗುಂಪಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಕರ್ನಾಟಕ ಜಯಿಸಿದೆ. ತಂಡದ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಆಂಧ್ರದ ಎದುರು ಮತ್ತು ಮನೀಷ್ ಪಾಂಡೆ ಸರ್ವಿಸಸ್ ಎದುರು ಶತಕ ಗಳಿಸಿದ್ದರು. ಅವರ ಅಬ್ಬರದ ಆಟಕ್ಕೆ ಎದುರಾಳಿ ತಂಡಗಳು ಸುಲಭವಾಗಿ ಶರಣಾಗಿದ್ದವು.
ಬಿಹಾರ ಕೂಡ ಸುಲಭವಾಗಿ ತುತ್ತಾಗುವಂತೆ ಕಾಣುತ್ತಿದೆ. ಏಕೆಂದರೆ ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಅದು ಸೋತಿದೆ. ಯಾವ ಪಂದ್ಯದಲ್ಲಿಯೂ 200 ರನ್‌ಗಳ ಮೊತ್ತವನ್ನು ತಲುಪಿಯೇ ಇಲ್ಲ. ಗೋವಾ ಎದುರು ಗಳಿಸಿದ್ದ 173 ರನ್‌ಗಳೇ ದೊಡ್ಡ ಸ್ಕೋರ್. ದೇಶಿ ಕ್ರಿಕೆಟ್‌ನಲ್ಲಿ ಮರಳಿ ಹೆಜ್ಜೆಯೂರುವ ಯತ್ನದಲ್ಲಿರುವ ಬಿಹಾರ ತಂಡಕ್ಕೆ ಈ ಟೂರ್ನಿ ಅನುಭವದ ವೇದಿಕೆ ಮಾತ್ರ.
ಕರ್ನಾಟಕ ತಂಡದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದ್ದರಿಂದ ಅವರಿಗೆ ತಡೆಯೊಡ್ಡಲು ಬಿಹಾರ ತಂಡವು ವಿಶೇಷ ತಂತ್ರ ಹೆಣೆಯಬೇಕು. ಬಿಹಾರ ತಂಡವು ಕಠಿಣ ಸವಾಲು ಒಡ್ಡುವ ಸಾಧ್ಯತೆಗಳು ಕಡಿಮೆ ಇವೆ. ಆದ್ದರಿಂದ ಕರ್ನಾಟಕ ತಂಡದಲ್ಲಿ ಕೆಲವು ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಬೆಂಚ್‌ನಲ್ಲಿರುವ ಆಟಗಾರರಿಗೆ ಅವಕಾಶ ಕೊಡಬಹುದು.
ತಂಡಗಳು
ಕರ್ನಾಟಕ: ಮನೀಷ್ ಪಾಂಡೆ (ನಾಯಕ), ದೇವದತ್ತ ಪಡಿಕ್ಕಲ್, ರೋಹನ್ ಕದಂ, ಲವನೀತ್ ಸಿಸೋಡಿಯಾ (ವಿಕೆಟ್‌ಕೀಪರ್). ಕರುಣ್ ನಾಯರ್, ಜೆ. ಸುಚಿತ್, ಆರ್. ಸಮರ್ಥ್, ಶ್ರೇಯಸ್ ಗೋಪಾಲ್, ಪವನ್ ದೇಶಪಾಂಡೆ, ಅನಿರುದ್ಧ ಜೋಶಿ, ವಿ.ಕೌಶಿಕ್, ಪ್ರತೀಕ್ ಜೈನ್, ನಿಹಾಲ್ ಉಳ್ಳಾಲ್
ಬಿಹಾರ: ಆಶುತೋಷ್ ಅಮನ್ (ನಾಯಕ), ಸರ್ಫರಾಜ್ ಅಶ್ರಫ್, ಬಾಬುಲ್ ಕುಮಾರ್, ಶೇಶೀಮ್ ರಾಥೋಡ್, ಶಶಿ ಶೇಖರ್, ಈಶಾನ್ ರವಿ, ಅನ್ಷುಮನ್ ಗೌತಮ್, ಎಂ.ಡಿ. ರೆಹಮುತ್ ಉಲ್ಲಾ, ವಿವೇಕ್ ಕುಮಾರ್, ಅಸ್ಫಾನ್ ಖಾನ್, ಪ್ರಶಾಂತ್ ಸಿಂಗ್, ಶಿವಂ ಕುಮಾರ್, ವಿಪುಲ್ ಕೃಷ್ಣ, ರಾಜೇಶ್ ಸಿಂಗ್
ಆರಂಭ: ಬೆಳಿಗ್ಗೆ 8.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.