ADVERTISEMENT

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 14:28 IST
Last Updated 26 ಅಕ್ಟೋಬರ್ 2023, 14:28 IST
   

ಡೆಹ್ರಾಡೂನ್‌: ಉತ್ತರ ಪ್ರದೇಶದ ಅನುಭವಿ ಮಧ್ಯಮವೇಗಿ ಭುವನೇಶ್ವರ್ ಕುಮಾರ್ (16ಕ್ಕೆ5) ಅವರ ಅಮೋಘ ಬೌಲಿಂಗ್ ಮುಂದೆ ಕರ್ನಾಟಕ ತತ್ತರಿಸಿತು.

ಇದರಿಂದಾಗಿ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ನಾಕೌಟ್ ಪ್ರವೇಶದ ಹಾದಿ ಕಠಿಣವಾಯಿತು.

ಅಭಿಮನ್ಯು ಕ್ರಿಕೆಟ್ ಅಕಾಡೆಮಿಯ ಮೈದಾನದಲ್ಲಿ ಬುಧವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು 40 ರನ್‌ಗಳಿಂದ ಸೋತಿತು. ಟೂರ್ನಿಯಲ್ಲಿ ತಂಡಕ್ಕೆ ಇದು ಎರಡನೇ ಸೋಲು. ಕರ್ನಾಟಕದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇನ್ನೆರಡು ಪಂದ್ಯಗಳಲ್ಲಿ ಗೆದ್ದಿತ್ತು. ಇದರಿಂದಾಗಿ ಹತ್ತು ಪಾಯಿಂಟ್‌ಗಳನ್ನು ಕಲೆಹಾಕಿದೆ. ಮಧ್ಯಪ್ರದೇಶ ಮತ್ತು ತಮಿಳುನಾಡು ಕೂಡ ತಲಾ 10 ಅಂಕ ಗಳಿಸಿವೆ.  ಉತ್ತಮ ನೆಟ್‌ರನ್‌ ರೇಟ್ ಇರುವ ಕಾರಣ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಎಲ್ಲ ತಂಡಗಳಿಗೂ ತಲಾ ಒಂದು ಪಂದ್ಯ ಉಳಿದಿದೆ.

ADVERTISEMENT

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 196 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಮಯಂಕ್ ಅಗರವಾಲ್ (59 ರನ್) ಬಲ ತುಂಬುವ ಯತ್ನ ಮಾಡಿದರು. ಆದರೆ ಉಳಿದ ಬ್ಯಾಟರ್‌ಗಳು ನಿರಾಶೆ ಮೂಡಿಸಿದರು. ಭುವಿಯ ಸ್ವಿಂಗ್ ಎಸೆತಗಳಿಗೆ ಶರಣಾದರು. ತಂಡವು 18.3 ಓವರ್‌ಗಳಲ್ಲಿ 156 ರನ್‌ ಗಳಿಸಿ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರು

ಉತ್ತರಪ್ರದೇಶ: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 196 (ಅಭಿಷೇಕ್ ಗೋಸ್ವಾಮಿ  77, ನಿತೀಶ್ ರಾಣಾ 40, ರಿಂಕು ಸಿಂಗ್ ಔಟಾಗದೆ 31, ಧ್ರುವ್ ಜುರೇಲ್ ಔಟಾಗದೆ 25, ಕೆ. ಗೌತಮ್ 35ಕ್ಕೆ2)

ಕರ್ನಾಟಕ: 18.3 ಓವರ್‌ಗಳಲ್ಲಿ 156 (ಮಯಂಕ್ ಅಗರವಾಲ್ 59, ಬಿ.ಆರ್. ಶರತ್ 26, ಭುವನೇಶ್ವರ್ ಕುಮಾರ್ 16ಕ್ಕೆ5, ಯಶ್ ದಯಾಳ್ 40ಕ್ಕೆ2)

ಫಲಿತಾಂಶ: ಉತ್ತರ ಪ್ರದೇಶ ತಂಡಕ್ಕೆ 40 ರನ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.