ADVERTISEMENT

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್: ಸ್ಮರಣ್, ಮಯಂಕ್ ಆಟಕ್ಕೆ ಒಲಿದ ಜಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 13:03 IST
Last Updated 25 ನವೆಂಬರ್ 2024, 13:03 IST
ಆರ್. ಸ್ಮರಣ್ ಬ್ಯಾಟಿಂಗ್ ವೈಖರಿ  –ಪ್ರಜಾವಾಣಿ ಸಂಗ್ರಹದಿಂದ
ಆರ್. ಸ್ಮರಣ್ ಬ್ಯಾಟಿಂಗ್ ವೈಖರಿ  –ಪ್ರಜಾವಾಣಿ ಸಂಗ್ರಹದಿಂದ   

ಇಂದೋರ್: ನಾಯಕ ಮಯಂಕ್ ಅಗರವಾಲ್ ಮತ್ತು ಸ್ಮರಣ್ ರವಿಚಂದ್ರನ್ ಅವರ ಜೊತೆಯಾಟದ ಬಲದಿಂದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತ್ರಿಪುರ ವಿರುದ್ಧ ಜಯಿಸಿತು. 

ಎಮೆರಾಲ್ಡ್ ಪ್ರೌಢಶಾಲೆ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಬೌಲರ್‌ಗಳು ಮತ್ತೊಮ್ಮೆ ದುಬಾರಿಯಾದರು. ಅದರಿಂದಾಗಿ ತ್ರಿಪುರ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 185 ರನ್‌ಗಳಿಸಿ ಮಯಂಕ್ ಬಳಗಕ್ಕೆ ಕಠಿಣ ಸವಾಲೊಡ್ಡಿತು.

ಅದಕ್ಕುತ್ತರವಾಗಿ ಕರ್ನಾಟಕವು ಇನಿಂಗ್ಸ್‌ನಲ್ಲಿ ಇನ್ನೂ 3 ಎಸೆತಗಳು ಬಾಕಿಯಿರುವಾಗಲೇ 5 ವಿಕೆಟ್‌ಗಳಿಗೆ 191 ರನ್ ಗಳಿಸಿತು. 5 ವಿಕೆಟ್‌ಗಳಿಂದ ಜಯಿಸಿತು. ಮಯಂಕ್ (51; 31ಎ, 4X3, 6X3) ಮತ್ತು ಸ್ಮರಣ್ (57; 31ಎ, 4ಷ8, 6X2) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಭಿನವ್ ಮನೋಹರ್ (ಅಜೇಯ 34; 16ಎ, 6X4) ಮತ್ತು ಶುಭಾಂಗ್ ಹೆಗ್ಡೆ (ಔಟಾಗದೆ 20; 9ಎ, 4X1, 6X1) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 

ADVERTISEMENT

ಕರ್ನಾಟಕದ ಇನಿಂಗ್ಸ್‌ ಆರಂಭದಲ್ಲಿಯೇ ಎಲ್‌.ಆರ್.ಚೇತನ್ ಅವರ ವಿಕೆಟ್ ಗಳಿಸಿದ ತ್ರಿಪುರದ ಅಭಿಜಿತ್ ಸರ್ಕಾರ್ ಪೆಟ್ಟು ಕೊಟ್ಟರು. ಮಯಂಕ್ ಮತ್ತು ಕೃಷ್ಣನ್ ಶ್ರೀಜಿತ್ (16 ರನ್)  ಸ್ವಲ್ಪ ಹೊತ್ತು ಇನಿಂಗ್ಸ್‌ ಬೆಳೆಸುವ ಪ್ರಯತ್ನ ಮಾಡಿದರು. ಆದರೆ ಐದನೇ ಓವರ್‌ನಲ್ಲಿ ಶ್ರೀಜಿತ್ ವಿಕೆಟ್ ಗಳಿಸಿದ ಸರ್ಕಾರ್ ಮತ್ತೊಂದು ಪೆಟ್ಟುಕೊಟ್ಟರು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಸ್ಮರಣ್ ಅವರು ನಾಯಕನೊಂದಿಗೆ ಸೇರಿ ಇನಿಂಗ್ಸ್‌ಗೆ ಬಲ ತುಂಬಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 101 ರನ್‌ ಸೇರಿಸಿದರು. ಇದು ಗೆಲುವಿಗೆ ನೆರವಾಯಿತು. 

ಆದರೆ 14ನೇ ಓವರ್‌ನಲ್ಲಿ ಸ್ಮರಣ್ ಅವರನ್ನು ರನ್‌ಔಟ್ ಮಾಡಿದ ಫೀಲ್ಡರ್ ಮನದೀಪ್ ಸಿಂಗ್ ಜೊತೆಯಾಟ ಮುರಿದರು. ಆದರೂ ತ್ರಿಪುರ ತಂಡದ ಸೋಲು ತಪ್ಪಲಿಲ್ಲ. ಐಪಿಎಲ್ ಹರಾಜಿನಲ್ಲಿ ಉತ್ತಮ ಪಡೆದ ಖುಷಿಯಲ್ಲಿರುವ ಅಭಿನವ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 

ಆದರೆ ಬೆಳಿಗ್ಗೆ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡದ ಬೌಲರ್‌ಗಳು ದುಬಾರಿಯಾದರು. ಸಮರ್ಥ್ ಸೂತ್ರಧಾರ (55; 36ಎ) ಮತ್ತು ಮನದೀಪ್ (66; 41ಎ) ಅವರು ಕರ್ನಾಟಕದ ಬೌಲರ್‌ಗಳನ್ನು ದಂಡಿಸಿದರು. ಅನುಭವಿ ವಿ. ಕೌಶಿಕ್, ವೈಶಾಖ ವಿಜಯಕುಮಾರ್ ಮತ್ತು ಶುಭಾಂಗ್ ಅವರು ಹೆಚ್ಚು ದಂಡನೆಗೆ ಒಳಗಾದರು. 

ಮೊದಲ ಪಂದ್ಯದಲ್ಲಿ ತಂಡವು ಉತ್ತರಾಖಂಡ ಎದುರು ಸೋತಿತ್ತು. 

ಸಂಕ್ಷಿಪ್ತ ಸ್ಕೋರು: ತ್ರಿಪುರ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 185 (ಸಮರ್ಥ್ ಸೂತ್ರಧಾರ 55, ಮನದೀಪ್ ಸಿಂಗ್ ಔಟಾಗದೆ 66, ಮಣಿಶಂಕರ್ ಮುರಾಸಿಂಗ್ 26, ಶರತ್ ಶ್ರೀನಿವಾಸ್ ಔಟಾಗದೆ 11, ವಿ. ಕೌಶಿಕ್ 36ಕ್ಕೆ1, ವಿದ್ಯಾಧರ್ ಪಾಟೀಲ 29ಕ್ಕೆ1, ಶ್ರೇಯಸ್ ಗೋಪಾಲ್ 26ಕ್ಕೆ1)

ಕರ್ನಾಟಕ: 19.3 ಓವರ್‌ಗಳಲ್ಲಿ 5ಕ್ಕೆ191 (ಮಯಂಕ್ ಅಗರವಾಲ್ 51, ಸ್ಮರಣ್ ರವಿಚಂದ್ರನ್ 57, ಅಭಿನವ್ ಮನೋಹರ್ ಔಟಾಗದೆ 34, ಶುಭಾಂಗ್ ಹೆಗ್ಡೆ ಔಟಾಗದೆ 20, ಅಭಿಜಿತ್ ಸರ್ಕಾರ್ 31ಕ್ಕೆ2)

ಫಲಿತಾಂಶ: ಕರ್ನಾಟಕ ತಂಡಕ್ಕೆ 5 ವಿಕೆಟ್ ಜಯ. ಪಂದ್ಯದ ಆಟಗಾರ: ಸ್ಮರಣ್ ರವಿಚಂದ್ರನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.