ADVERTISEMENT

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ: ತಾರಾ ಆಟಗಾರರ ರಂಗು

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ: ಕರ್ನಾಟಕಕ್ಕೆ ಉತ್ತರಾಖಂಡ ಎದುರಾಳಿ

ಪಿಟಿಐ
Published 22 ನವೆಂಬರ್ 2024, 22:11 IST
Last Updated 22 ನವೆಂಬರ್ 2024, 22:11 IST
ಶಮಿ
ಶಮಿ   

ನವದೆಹಲಿ/ಇಂದೋರ್‌: ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವೇಗಿ ಮೊಹಮ್ಮದ್ ಶಮಿ ಅವರು ಸೇರಿದಂತೆ ಕೆಲವು ತಾರಾ ವರ್ಚಸ್ಸಿನ ಆಟಗಾರರು ಶನಿವಾರ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.  

ಬರೋಡಾ ತಂಡವನ್ನು ಪ್ರತಿನಿಧಿಸುತ್ತಿರುವ ಪಾಂಡ್ಯ ಅವರನ್ನು ಈಚೆಗೆ ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡವು ರಿಟೇನ್ ಮಾಡಿಕೊಂಡಿತ್ತು.  ಶಮಿ ಅವರು ಗಾಯದಿಂದ ಚೇತರಿಸಿಕೊಂಡ ನಂತರ ತಮ್ಮ ದೈಹಿಕ ಕ್ಷಮತೆಯನ್ನು ಪಣಕ್ಕೊಡ್ಡಿದ್ದಾರೆ.

ಅವರು  ಈಚೆಗೆ ನಡೆದ ರಣಜಿ ಟ್ರೋಫಿ ಟೂರ್ನಿಯ ಮೊದಲ ಹಂತದ ಪಂದ್ಯಗಳಲ್ಲಿ ಆಡಿದ್ದರು. ಅವರು ಬಂಗಾಳ ತಂಡವನ್ನು
ಪ್ರತಿನಿಧಿಸುತ್ತಿದ್ದಾರೆ. ಅವರು ಈ ಟೂರ್ನಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರೆ ಆಸ್ಟ್ರೇಲಿಯಾ ವಿಮಾನವೇರಿ ಭಾರತ ತಂಡ ಸೇರಿಕೊಳ್ಳುವ ಸಾಧ್ಯತೆಯೂ ಇದೆ. 

ADVERTISEMENT

ಇವರಲ್ಲದೇ ಶ್ರೇಯಸ್ ಅಯ್ಯರ್ (ಮುಂಬೈ), ಯಜುವೇಂದ್ರ ಚಾಹಲ್ (ಹರಿಯಾಣ) ಕೂಡ ಟೂರ್ನಿಯಲ್ಲಿ ಆಡಲಿದ್ದಾರೆ. 

ಕರ್ನಾಟಕಕ್ಕೆ ಜಯದ ತವಕ: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಬಿ ಗುಂಪಿನಲ್ಲಿ ಆಡಲಿದೆ. ಈ ಗುಂಪಿನಲ್ಲಿ ಮಯಂಕ್ ಬಳಗಕ್ಕೆ ಕಠಿಣ ಸವಾಲು ಎದುರಾಗಲಿದೆ. ಸೌರಾಷ್ಟ್ರ, ಉತ್ತರಾಖಂಡ, ತಮಿಳುನಾಡು, ತ್ರಿಪುರಾ, ಬರೋಡಾ, ಸಿಕ್ಕಿಂ ಮತ್ತು ಗುಜರಾತ್ ತಂಡಗಳು ಈ ಗುಂಪಿನಲ್ಲಿವೆ. 

ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ಕರ್ನಾಟಕವು ಉತ್ತರಾಖಂಡವನ್ನು ಎದುರಿಸಲಿದೆ. ಇಂದೋರಿನ ಎಮೆರಾಲ್ಡ್‌ ಹೈಸ್ಕೂಲು ಮೈದಾನದಲ್ಲಿ ಪಂದ್ಯ ನಡೆಯಲಿದೆ. 

ಈ ಟೂರ್ನಿಯ ಇತಿಹಾಸದಲ್ಲಿ ಕರ್ನಾಟಕ ಎರಡು ಬಾರಿ ಚಾಂಪಿಯನ್ ಮತ್ತು ಒಂದು ಸಲ ರನ್ನರ್ಸ್ ಅಪ್ ಆಗಿದೆ. ತಂಡದಲ್ಲಿ ಅನುಭವಿ ಮಯಂಕ್, ಮನೀಷ್ ಪಾಂಡೆ, ಶ್ರೇಯಸ್ ಗೋಪಾಲ್ ಅವರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವೈಶಾಖ ವಿಜಯಕುಮಾರ್ ಅವರು ತಂಡಕ್ಕೆ ಮರಳಿದ್ದಾರೆ. ವಿ. ಕೌಶಿಕ್, ವಿದ್ಯಾಧರ್ ಪಾಟೀಲ ಹಾಗೂ ಎಲ್. ಮನ್ವಂತ್ ಕುಮಾರ್ ವೇಗದ ವಿಭಾಗದಲ್ಲಿದ್ದಾರೆ. ಸ್ಪಿನ್ನರ್ ಶುಭಾಂಗ್ ಹೆಗ್ಡೆ ಅವರೂ ತಂಡದಲ್ಲಿದ್ದಾರೆ.  ಉತ್ತರಾಖಂಡ ತಂಡದಲ್ಲಿ ಕನ್ನಡಿಗ ರವಿಕುಮಾರ್ ಸಮರ್ಥ್ ಅವರು ಇದ್ದಾರೆ. 

ಮಯಂಕ್ ಅಗರವಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.