ADVERTISEMENT

T20 WC: ಇತಿಹಾಸ ರಚಿಸಿದ ಅಫ್ಗನ್, ಗಾಯದ ನಾಟಕವಾಡಿದ ಗುಲ್ಬದಿನ್, ಆಸೀಸ್ ನಿರ್ಗಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2024, 9:42 IST
Last Updated 25 ಜೂನ್ 2024, 9:42 IST
<div class="paragraphs"><p>ಅಫ್ಗಾನಿಸ್ತಾನದ ಆಟಗಾರರ ಸಂಭ್ರಮ</p></div>

ಅಫ್ಗಾನಿಸ್ತಾನದ ಆಟಗಾರರ ಸಂಭ್ರಮ

   

(ಚಿತ್ರ ಕೃಪೆ: X@T20WorldCup)

ಸೇಂಟ್ ವಿನ್ಸೆಂಟ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನ ನಡುವಣ ಪಂದ್ಯದಲ್ಲಿ ಹಲವು ನಾಟಕೀಯ ಸನ್ನಿವೇಶಗಳು ಸೃಷ್ಟಿಯಾಯಿತು. ಅಂತಿಮವಾಗಿ ಮಳೆ ಬಾಧಿತ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ಎಂಟು ರನ್‌ಗಳ ಅಂತರದಿಂದ ಜಯಿಸಿದ ಅಫ್ಗಾನಿಸ್ತಾನ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ADVERTISEMENT

ಇತಿಹಾಸ ರಚಿಸಿದ ಅಫ್ಗಾನಿಸ್ತಾನ...

ಐಸಿಸಿಯ ಯಾವುದೇ ಮಾದರಿಯ ಟೂರ್ನಿಯಲ್ಲಿ ಅಫ್ಗಾನಿಸ್ತಾನ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಆ ಮೂಲಕ ರಶೀದ್ ಖಾನ್ ಬಳಗ ನೂತನ ಇತಿಹಾಸ ರಚಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಗನ್ ಐದು ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮಳೆಯಿಂದಾಗಿ ಹಲವು ಬಾರಿ ಪಂದ್ಯ ಸ್ಥಗಿತಗೊಂಡಿತು. ಇದರಿಂದಾಗಿ ಬಾಂಗ್ಲಾದೇಶಕ್ಕೆ 19 ಓವರ್‌ಗಳಲ್ಲಿ 114 ರನ್ ಗುರಿ ಮರು ನಿಗದಿಪಡಿಸಲಾಯಿತು. ಆದರೆ 17.5 ಓವರ್‌ಗಳಲ್ಲಿ 105 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಬಾಂಗ್ಲಾದೇಶ, ಆಸ್ಟ್ರೇಲಿಯಾ ನಿರ್ಗಮನ...

ಅಫ್ಗಾನಿಸ್ತಾನದ ಗೆಲುವಿನೊಂದಿಗೆ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡಗಳು ಟೂರ್ನಿಯಿಂದ ನಿರ್ಗಮಿಸಿವೆ. ಸೆಮಿಫೈನಲ್‌ಗೆ ಪ್ರವೇಶಿಸಲು ಬಾಂಗ್ಲಾದೇಶ, ಅಫ್ಗನ್ ನೀಡಿದ ಗುರಿಯನ್ನು 12.1 ಓವರ್‌ಗಳಲ್ಲಿ ಚೇಸ್ ಮಾಡಬೇಕಿತ್ತು. ಮತ್ತೊಂದೆಡೆ ಬಾಂಗ್ಲಾದೇಶ ಗೆದ್ದರೆ ಆಸ್ಟ್ರೇಲಿಯಾ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಡುವ ಸಾಧ್ಯತೆಯಿತ್ತು. ಆದರೆ ಇವೆರಡಕ್ಕೂ ಅಫ್ಗಾನಿಸ್ತಾನ ಅವಕಾಶ ಮಾಡಿಕೊಡಲಿಲ್ಲ.

ಗಾಯದ ನಾಟಕವಾಡಿದ ಗುಲ್ಬದಿನ್...

ಯಾವುದೇ ಥ್ರಿಲ್ಲರ್ ಮೂವೀಗಿಂತಲೂ ಹೆಚ್ಚಿನ ಮನರಂಜನೆಯನ್ನು ಈ ಪಂದ್ಯವು ನೀಡಿತು ಅಂದರೆ ತಪ್ಪಾಗಲಾರದು. ಪಂದ್ಯದಲ್ಲಿ ಹಲವು ನಾಟಕೀಯ ಸನ್ನಿವೇಶಗಳು ಸೃಷ್ಟಿಯಾಯಿತು. ಒಂದು ಹಂತದಲ್ಲಿ ಪಂದ್ಯವನ್ನು ವಿಳಂಬಗೊಳಿಸುವ ತಂತ್ರಗಾರಿಕೆಯ ನಿಟ್ಟಿನಲ್ಲಿ ಅಫ್ಗನ್ ಆಟಗಾರ ಗುಲ್ಬದಿನ್ ನೈಬ್ ಗಾಯದ ನಾಟಕವಾಡಿದರು. ಮಳೆ ಬರುವುದನ್ನು ಅಂದಾಜು ಮಾಡಿದ ಅಫ್ಗಾನಿಸ್ತಾನದ ಕೋಚ್ ಪಂದ್ಯವನ್ನು ವಿಳಂಬಗೊಳಿಸುವಂತೆ ಗ್ಯಾಲರಿಯಿಂದಲೇ ಆಟಗಾರರಿಗೆ ಸೂಚನೆ ನೀಡಿದ್ದರು.

ಈ ವೇಳೆ ಡಿಆರ್‌ಎಸ್ ನಿಯಮದ ಅನ್ವಯ ಅಫ್ಗನ್ ಕೇವಲ ಎರಡು ರನ್‌ಗಳ ಮುನ್ನಡೆಯಲ್ಲಿತ್ತು. ಇದನ್ನು ಗಮನಿಸಿದ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗುಲ್ಬದಿನ್, ಏಕಾಏಕಿ ಸ್ನಾಯು ಸೆಳೆತಕ್ಕೊಳಗಾದಂತೆ ಕುಸಿದು ಬಿದ್ದರು. ಬಳಿಕ ಫಿಸಿಯೋ ನೆರವು ಪಡೆದ ಗುಲ್ಬದಿನ್, ಕುಟುಂತ್ತಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಮಳೆಯಿಂದಾಗಿ ಪಂದ್ಯಕ್ಕೆ ಸ್ವಲ್ಪ ಹೊತ್ತು ಅಡಚಣೆಯಾದರೂ ಮತ್ತೆ ಪುನರಾರಂಭಗೊಂಡಿತು. ಇದರಿಂದಾಗಿ ಗುಲ್ಬದಿನ್ ನಾಟಕ ಪಂದ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಆದರೂ ಕ್ರೀಡಾಸ್ಫೂರ್ತಿ ಮರೆತ ಗುಲ್ಬದಿನ್ ಭಾರಿ ಟೀಕೆಗೆ ಒಳಗಾಗಿದ್ದಾರೆ.

ರಶೀದ್, ನವೀನ್ ತಲಾ ನಾಲ್ಕು ವಿಕೆಟ್ ಸಾಧನೆ...

ಅಫ್ಗನ್ ಪರ ಪ್ರಭಾವಿ ದಾಳಿ ಸಂಘಟಿಸಿದ ನಾಯಕ ರಶೀದ್ ಖಾನ್ ಹಾಗೂ ವೇಗದ ಬೌಲರ್ ನವೀನ್ ಉಲ್ ಹಕ್ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಸ್ನಾಯು ಸೆಳೆತದ ನಾಟಕದ ಬಳಿಕ ಮತ್ತೆ ಮೈದಾನಕ್ಕಿಳಿದ ಗುಲ್ಬದಿನ್ ನೈಬ್ ಸಹ ಒಂದು ವಿಕೆಟ್ ಪಡೆದರು.

ರಶೀದ್ ಖಾನ್, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಲ (9) ನಾಲ್ಕು ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಮತ್ತೊಂದೆಡೆ ನವೀನ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕೊನೆಯವರೆಗೂ ಅಜೇಯ...

ಆರಂಭಿಕನಾಗಿ ಕಣಕ್ಕಿಳಿದ ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ಲಿಟನ್ ದಾಸ್ ಕೊನೆಯವರೆಗೂ ಔಟ್ ಆಗದೇ ಉಳಿದರು. 49 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರು. ಈ ಮೂಲಕ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದರು. 2009ರಲ್ಲಿ ಶ್ರೀಲಂಕಾ ವಿರುದ್ಧ ಗೇಲ್ ಆರಂಭಿಕನಾಗಿ ಕಣಕ್ಕಿಳಿದು ಕೊನೆಯವರೆಗೆ ಔಟ್ ಆಗದೇ ಉಳಿದಿದ್ದರು.

ಅಫ್ಗನ್ ಆಟಗಾರರ ಮೇಲುಗೈ..

ಪ್ರಸಕ್ತ ಸಾಗುತ್ತಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಹಾಗೂ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಅಫ್ಗಾನಿಸ್ತಾನದ ಆಟಗಾರರು ಮೇಲುಗೈ ಸಾಧಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಹಮಾನುಲ್ಲಾ ಗುರ್ಬಾಜ್ (281) ಮುಂಚೂಣಿಯಲ್ಲಿದ್ದಾರೆ. ಹಾಗೆಯೇ 16 ವಿಕೆಟ್ ಗಳಿಸಿರುವ ಫಜಲ್‌ಹಕ್ ಫರೂಕಿ, ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಅಫ್ಗಾನಿಸ್ತಾನದ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅತ್ತ ಅಫ್ಗಾನಿಸ್ತಾನದಲ್ಲೂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಬಾಂಗ್ಲಾ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಅಫ್ಗನ್ - ಮ್ಯಾಚ್ ಹೈಲೈಟ್ ಇಲ್ಲಿ ವೀಕ್ಷಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.