ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಸಿ' ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ 84 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಗಯಾನದ ಪ್ರಾವಿಡೆನ್ಸ್ ಮೈದಾನದಲ್ಲಿ ಭಾರತೀಯ ಕಾಲಮಾನ ಇಂದು ಮುಂಜಾನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಗಾನಿಸ್ತಾನ ಆರು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
ಈ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ 15.2 ಓವರ್‌ಗಳಲ್ಲಿ ಕೇವಲ 75 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದರೊಂದಿಗೆ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್‌ನಲ್ಲಿ ಮಗದೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದೆ. ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಅಫ್ಗಾನಿಸ್ತಾನ ನಾಲ್ಕು ಅಂಕಗಳೊಂದಿಗೆ 'ಸಿ' ಗುಂಪಿನಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ.
ಅಫ್ಗಾನಿಸ್ತಾನದ ಪರ ವೇಗಿ ಫಜಲ್ಹಕ್ ಫರೂಖಿ (17ಕ್ಕೆ 4) ಹಾಗೂ ನಾಯಕ ರಶೀದ್ ಖಾನ್ (17ಕ್ಕೆ 4) ತಲಾ ನಾಲ್ಕು ವಿಕೆಟ್ ಗಳಿಸಿ ಮಿಂಚಿದರು. ಮೊಹಮ್ಮದ್ ನಬಿ ಎರಡು ವಿಕೆಟ್ ಗಳಿಸಿದರು.
ಈ ಮೊದಲು ಆರಂಭಿಕ ಬ್ಯಾಟರ್ ಹಮಾನುಲ್ಲಾ ಗುರ್ಬಾಜ್ (80) ಹಾಗೂ ಇಬ್ರಾಹಿಂ ಜರ್ದಾನ್ (44)ಶತಕದ ಜೊತೆಯಾಟ ಕಟ್ಟಿದರು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಹಾಗೂ ಮ್ಯಾಟ್ ಹೆನ್ರಿ ತಲಾ ಎರಡು ವಿಕೆಟ್ ಗಳಿಸಿದರು.
ನಾಯಕ ಕೇನ್ ವಿಲಿಯಮ್ಸನ್ (9), ಡೆವೊನ್ ಕಾನ್ವೇ (8), ಫಿನ್ ಅಲೆನ್ (0), ಡೆರಿಲ್ ಮಿಚೆಲ್ (5), ಗ್ಲೆನ್ ಫಿಲಿಪ್ಸ್ (18) ಹಾಗೂ ಮಾರ್ಕ್ ಚಾಪ್‌ಮ್ಯಾನ್ (4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.