ADVERTISEMENT

T20 WC: ಪಾಕ್‌ ವಿರುದ್ಧ ಭಾರತಕ್ಕೆ ಸೋಲು, ಕೊಹ್ಲಿ ಹೇಳಿಕೆಗೆ ಜಡೇಜಾ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2021, 8:47 IST
Last Updated 28 ಅಕ್ಟೋಬರ್ 2021, 8:47 IST
ಭಾರತ ಕ್ರಿಕೆಟ್‌ ತಂಡದ ಆಟಗಾರರು –ಪಿಟಿಐ ಚಿತ್ರ
ಭಾರತ ಕ್ರಿಕೆಟ್‌ ತಂಡದ ಆಟಗಾರರು –ಪಿಟಿಐ ಚಿತ್ರ   

ನವದೆಹಲಿ: ಪಾಕ್‌ ತಂಡವು ನಮಗಿಂತ ಉತ್ತಮ ಪ್ರದರ್ಶನ ನೀಡಿತು ಎಂಬ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಹೇಳಿಕೆಗೆ ಭಾರತದ ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾ ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಅ.24 ರಂದು (ಭಾನುವಾರ) ನಡೆದಿದ್ದ ಪಂದ್ಯದಲ್ಲಿ ಪಾಕ್ ವಿರುದ್ಧ ಟಾಸ್ ಸೋತು ಕಣಕ್ಕಿಳಿದಿದ್ದ ಭಾರತ ಆರಂಭದಲ್ಲೇ ಎರಡು ಪ್ರಮುಖ ವಿಕೆಟ್​ಗಳನ್ನು ಕೈಚೆಲ್ಲಿತ್ತು. ಮೊದಲ ಓವರ್​ನಲ್ಲಿ ರೋಹಿತ್ ಶರ್ಮಾ(0), ಕೆ. ಎಲ್. ರಾಹುಲ್ (3) ಕ್ಲೀನ್ ಬೌಲ್ಡ್ ಆಗಿದ್ದರು. ಈ ಎರಡು ವಿಕೆಟ್​ಗಳನ್ನು ಶಾಹೀನ್ ಅಫ್ರಿದಿ ಪಡೆದುಕೊಂಡಿದ್ದರು.

ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ, ‘ಪವರ್ ಪ್ಲೇ ಹಂತದಲ್ಲಿ ನಾವು ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ನಾವು ಯಾರನ್ನಾದರೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ವಿಶೇಷವಾಗಿ, ಪಾಕಿಸ್ತಾನದಂತಹ ತಂಡವು ಪ್ರಪಂಚದ ಯಾವ ತಂಡವನ್ನಾದರೂ ಸೋಲಿಸಬಹುದು’ ಎಂದು ಹೇಳಿದ್ದರು.

ADVERTISEMENT

ಕೊಹ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಜಯ್ ಜಡೇಜಾ, ‘ಪಾಕಿಸ್ತಾನ ವಿರುದ್ಧದ ಪಂದ್ಯ ಸೋತ ಬಳಿಕ ವಿರಾಟ್‌ ಕೊಹ್ಲಿ ಹೇಳಿಕೆಯನ್ನು ಕೇಳಿದ್ದೇನೆ. ಇದರಿಂದ ನನಗೆ ಬೇಸರ ತರಿಸಿದೆ. ಏಕೆಂದರೆ 2 ವಿಕೆಟ್‌ ಹೋದರೂ ಕ್ರೀಸ್‌ನಲ್ಲಿ ವಿರಾಟ್ ಕೊಹ್ಲಿ ಇದ್ದರು. ಪಂದ್ಯ ಕೈ ಜಾರಿತ್ತು ಎಂದು ಹೇಳುವ ಅಗತ್ಯವೇ ಇಲ್ಲ. ಇನ್ನೂ ಎಸೆತವನ್ನು ಎದುರಿಸದೇ ಇರುವಾಗಲೇ ಇಂಥದ್ದೊಂದು ಆಲೋಚನೆ ಕೊಹ್ಲಿ ತಲೆಯಲ್ಲಿ ಮೂಡಿದೆ ಎಂಬುದು ಭಾರತ ತಂಡದ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದಿದ್ದಾರೆ.

‘ನಾವು ಇಂಗ್ಲೆಂಡ್‌ ತಂಡವನ್ನು ನೋಡಿ ಕಲಿಯಬೇಕಿದೆ. ಅವರು ಕ್ರೀಸ್‌ನಲ್ಲಿ ಯಾರೇ ಇರಲಿ ಆಕ್ರಮಣಕಾರಿ ಆಟವಾಡುವುದೊಂದೇ ಅವರ ಮಂತ್ರವಾಗಿರುತ್ತದೆ. ಎರಡು ವಿಕೆಟ್ ಕಳೆದುಕೊಂಡಾಗ ಕುಗ್ಗಬಾರದು’ ಎಂದು ಜಡೇಜಾ ಹೇಳಿದ್ದಾರೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 24ರಂದು (ಭಾನುವಾರ) ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ.

ಇದರೊಂದಿಗೆ ಐಸಿಸಿ ವಿಶ್ವಕಪ್‌ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.