ADVERTISEMENT

T20 WC: ಮಿಲ್ಲರ್ 'ಕಿಲ್ಲರ್'; ಲಂಕಾ ಮಣಿಸಿದ ದ.ಆಫ್ರಿಕಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2021, 17:31 IST
Last Updated 30 ಅಕ್ಟೋಬರ್ 2021, 17:31 IST
ಡೇವಿಡ್ ಮಿಲ್ಲರ್
ಡೇವಿಡ್ ಮಿಲ್ಲರ್   

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಲಂಕಾ ಸ್ಪಿನ್ನರ್ವನಿಂದು ಹಸರಂಗ 'ಹ್ಯಾಟ್ರಿಕ್' ವಿಕೆಟ್ ಸಾಧನೆಯು ವ್ಯರ್ಥವೆನಿಸಿದೆ.

ಇದರೊಂದಿಗೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ. ಅತ್ತ ಲಂಕಾ ಅಷ್ಟೇ ಪಂದ್ಯಗಳಲ್ಲಿ ಎರಡನೇ ಸೋಲಿಗೆ ಒಳಗಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ, ಪಾತುಮ್ ನಿಸಂಕಾ ಸಮಯೋಚಿತ ಅರ್ಧಶತಕದ (72) ಹೊರತಾಗಿಯೂ 142 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ ಸೋಲಿನ ಭೀತಿಗೊಳಗಾಗಿತ್ತು. ಆದರೆ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಬಾರಿಸಿದ ಡೇವಿಡ್ ಮಿಲ್ಲರ್ (23*) ಬಿರುಸಿನ ಆಟದ ನೆರವಿನಿಂದ ಇನ್ನೊಂದು ಎಸೆತ ಬಾಕಿ ಉಳಿದಿರುವಂತೆಯೇ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ದಕ್ಷಿಣ ಆಫ್ರಿಕಾಗೆ ನಾಯಕ ತೆಂಬ ಬಾವುಮಾ (46) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಬಳಿಕ ಮುರಿಯದ ಏಳನೇ ವಿಕೆಟ್‌ಗೆ 34 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದ ಮಿಲ್ಲರ್ ಹಾಗೂ ಕಗಿಸೊ ರಬಡಾ (13*) ರೋಚಕ ಗೆಲುವು ದಾಖಲಿಸಲು ನೆರವಾದರು.

ಅಂತಿಮ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 15 ರನ್‌ಗಳ ಅವಶ್ಯತೆಯಿತ್ತು. ಆದರೆ ಎರಡು ಸಿಕ್ಸರ್ ಸಿಡಿಸಿದ ಮಿಲ್ಲರ್ ದ.ಆಫ್ರಿಕಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 13 ಎಸೆತಗಳನ್ನು ಎದುರಿಸಿದ ಮಿಲ್ಲರ್ 23 ರನ್ ಗಳಿಸಿ ಔಟಾಗದೆ ಉಳಿದರು. ಶ್ರೀಲಂಕಾ ಪರ ವನಿಂದು ಹಸರಂಗ ಹ್ಯಾಟ್ರಿಕ್ ಸಾಧನೆ ಮಾಡಿದರು.

ಈ ಮೊದಲು ಬ್ಯಾಟಿಂಗ್ ನಡೆಸಿದ ಲಂಕಾಗೆ ಪಾತುಮ್ ನಿಸಂಕಾ ಆಸರೆಯಾದರು. ಒಂದೆಡೆ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ವಿಕೆಟ್‌ನ ಇನ್ನೊಂದು ತುದಿಯಿಂದ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ನಿಸಂಕಾ, 72 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು.

58 ಎಸೆತಗಳನ್ನು ಎದುರಿಸಿದ ನಿಸಂಕಾ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. ಇನ್ನುಳಿದಂತೆ ಚರಿತ ಅಸಲಂಕ (21) ಹಾಗೂ ನಾಯಕ ದಸುನ್ ಶನಕ (11) ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಎರಡಂಕಿಯನ್ನು ತಲುಪಲಿಲ್ಲ.

ಲಂಕಾ ಓಟಕ್ಕೆ ಕಡಿವಾಣ ಹಾಕಿದ ತಬ್ರೇಜ್‌ ಶಮ್ಸಿ ಹಾಗೂ ಡ್ವೇನ್ ಪ್ರಿಟೋರಿಯಸ್‌ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.