ADVERTISEMENT

ಟಿ20 ವಿಶ್ವಕಪ್ ಫೈನಲ್: ‘ಮೊದಲ ಕಿರೀಟ’ದತ್ತ ಕೇನ್–ಫಿಂಚ್ ಚಿತ್ತ

ಪಿಟಿಐ
Published 14 ನವೆಂಬರ್ 2021, 4:06 IST
Last Updated 14 ನವೆಂಬರ್ 2021, 4:06 IST
ಕೇನ್ ವಿಲಿಯಮ್ಸನ್, ಆ್ಯರನ್ ಫಿಂಚ್
ಕೇನ್ ವಿಲಿಯಮ್ಸನ್, ಆ್ಯರನ್ ಫಿಂಚ್   

ದುಬೈ: ಟಾಸ್ಮಾನ್ ಸಾಗರದ ಆಚೀಚೆಯ ದಡಗಳಲ್ಲಿರುವ ನ್ಯೂಜಿಲೆಂಡ್– ಆಸ್ಟ್ರೇಲಿಯಾದ ತಂಡಗಳು ಮೊದಲ ಸಲ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಜಯಿಸುವ ಛಲದೊಂದಿಗೆ ಭಾನುವಾರ ಮುಖಾಮುಖಿಯಾಗಲಿವೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ನ್ಯೂಜಿಲೆಂಡ್ ಮೊದಲ ಸಲ ಮತ್ತು ಆಸ್ಟ್ರೇಲಿಯಾ ಎರಡನೇ ಸಲ ಫೈನಲ್ ಹಂತಕ್ಕೆ ತಲುಪಿವೆ. ಕೂಲ್ ಕ್ಯಾಪ್ಟನ್ ಖ್ಯಾತಿಯ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಸ್ಪೋಟಕ ಶೈಲಿಯ ಬ್ಯಾಟರ್ ಆ್ಯರನ್ ಫಿಂಚ್‌ ಅವರಿಬ್ಬರೂ ಇತಿಹಾಸ ನಿರ್ಮಿಸುವ ಛಲದಲ್ಲಿದ್ದಾರೆ. 2016ರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲಿ ನ್ಯೂಜಿಲೆಂಡ್ ಗೆದ್ದಿತ್ತು.

2019ರಲ್ಲಿ ಏಕದಿನ ವಿಶ್ವಕಪ್ ಫೈನಲ್‌ ತಲುಪಿದ್ದ ಕೇನ್‌ ವಿಲಿಯಮ್ಸನ್ ಬಳಗವು, ಹೋದ ಜೂನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ ಕೂಡ ಆಗಿದೆ. ಇದೀಗ ಚುಟುಕು ಕ್ರಿಕೆಟ್ ಕಿರೀಟಧಾರಣೆಯ ಕನಸು ಕಾಣುತ್ತಿದೆ. ಇಂಗ್ಲೆಂಡ್ ಎದುರಿನ ರೋಚಕ ಸೆಮಿಫೈನಲ್‌ನಲ್ಲಿ ಜಯ ಗಳಿಸಲು ಡೆರಿಲ್ ಮಿಚೆಲ್, ಡೆವೊನ್ ಕಾನ್ವೆ ಮತ್ತು ಜೇಮ್ಸ್ ನಿಶಾಮ್ ಅವರ ಬ್ಯಾಟಿಂಗ್ ಬಲ ಕಾರಣವಾಗಿತ್ತು. ಸೋಲಿನ ಆತಂಕ ಎದುರಿಸಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ADVERTISEMENT

ಕಿವೀಸ್‌ ತಂಡದಲ್ಲಿ ಒಂಬತ್ತನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಬಲವಿದೆ. ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಸ್ಪಿನ್ನರ್ ಈಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟನರ್ ಬೌಲಿಂಗ್‌ ವಿಭಾಗದ ಶಕ್ತಿಯಾಗಿದ್ದಾರೆ. ಆಸ್ಟ್ರೇಲಿಯಾ ತಂಡದ್ದು ಕೂಡ ಕಿವೀಸ್‌ಗೆ ಸಮಬಲವೇ. ನಾಯಕ ಫಿಂಚ್ ಲಯದಲ್ಲಿಲ್ಲ. ಆದರೆ, ಪಾಕಿಸ್ತಾನ ಎದುರಿನ ಸೆಮಿಫೈನಲ್‌ನಲ್ಲಿ ಗೆಲುವಿನ ರೂವಾರಿಗಳಾದ ಮಾರ್ಕಸ್‌ ಸ್ಟೋಯಿನಿಸ್ ಮತ್ತು ಮ್ಯಾಥ್ಯೂ ವೇಡ್ ಅವರನ್ನು ಕಟ್ಟಿಹಾಕಲು ಕಿವೀಸ್ ಬೌಲರ್‌ಗಳು ವಿಶೇಷ ಯೋಜನೆಯೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯ.

ತಂಡದ ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್, ಮಧ್ಯಮಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್ ಕೂಡ ರನ್‌ ಹೊಳೆ ಹರಿಸುವ ಬ್ಯಾಟರ್‌ಗಳು. ಬೌಲಿಂಗ್‌ನಲ್ಲಿ ಸ್ಪಿನ್ನರ್ ಆ್ಯಡಂ ಜಂಪಾ, ವೇಗಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಎದುರಾಳಿಗಳಿಗೆ ಕಠಿಣ ಸವಾಲೊಡ್ಡಬಲ್ಲ ಬೌಲರ್‌ಗಳು.

ನಾಲ್ಕರ ಘಟ್ಟದಲ್ಲಿ ಕಠಿಣ ಹಣಾಹಣಿಗಳಲ್ಲಿ ಜಯಿಸಿಬಂದಿರುವ ಎರಡೂ ತಂಡಗಳು ಭಾನುವಾರ ಮರಳುಗಾಡಿನ ಅಂಗಳದಲ್ಲಿ ಕ್ರಿಕೆಟ್‌ಪ್ರಿಯರಿಗೆ ರೋಚಕ ರಸದೌತಣ ನೀಡುವ ಎಲ್ಲ ಸಾಧ್ಯತೆಗಳೂ ಇವೆ.

ಆಸ್ಟ್ರೇಲಿಯಾ ಫೈನಲ್‌ ಹಾದಿ
ಸೂಪರ್‌ 12 ಹಂತ

* ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್‌ಗಳ ಜಯ
* ಶ್ರೀಲಂಕಾ ಎದುರು 7 ವಿಕೆಟ್‌ಗಳ ಜಯ
* ಇಂಗ್ಲೆಂಡ್‌ ಎದುರು 8 ವಿಕೆಟ್‌ಗಳ ಸೋಲು
* ಬಾಂಗ್ಲಾದೇಶ ವಿರುದ್ಧ 8 ವಿಕೆಟ್‌ಗಳ ಜಯ
* ವೆಸ್ಟ್ ಇಂಡೀಸ್‌ ವಿರುದ್ಧ 8 ವಿಕೆಟ್‌ಗಳ ಜಯ

ಸೆಮಿಫೈನಲ್‌
* ಪಾಕಿಸ್ತಾನ ಎದುರು 5 ವಿಕೆಟ್‌ಗಳ ಜಯ

ನ್ಯೂಜಿಲೆಂಡ್‌ ಫೈನಲ್‌ ಹಾದಿ
ಸೂಪರ್ 12 ಹಂತ
* ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಸೋಲು
* ಭಾರತದ ಎದುರು 8 ವಿಕೆಟ್‌ಗಳ ಜಯ
* ಸ್ಕಾಟ್ಲೆಂಡ್‌ ವಿರುದ್ಧ 16 ರನ್‌ಗಳ ಜಯ
* ನಮೀಬಿಯಾ ವಿರುದ್ಧ 52 ರನ್‌ಗಳ ಜಯ
* ಅಫ್ಗಾನಿಸ್ತಾನ ವಿರುದ್ಧ 8 ವಿಕೆಟ್‌ಗಳ ಜಯ

ಸೆಮಿಫೈನಲ್‌
* ಇಂಗ್ಲೆಂಡ್‌ ವಿರುದ್ಧ 5 ವಿಕೆಟ್‌ಗಳ ಜಯ

ಯಾರಿಗೆ ಒಲಿಯಲಿದೆ ಟಾಸ್‌?
ದುಬೈನಲ್ಲಿ ನಡೆದ ಪಂದ್ಯಗಳ ಜಯದಲ್ಲಿ ಟಾಸ್ ಜಯವೇ ಪ್ರಮುಖ ಪಾತ್ರ ವಹಿಸಿದೆ. ಎರಡನೇ ಇನಿಂಗ್ಸ್‌ ಬೌಲಿಂಗ್ ಮಾಡುವಾಗ ರಾತ್ರಿ ಸುರಿಯುವ ಇಬ್ಬನಿಯ ಸವಾಲು ಇರುತ್ತದೆ. ಆದ್ದರಿಂದ ಟಾಸ್ ಗೆದ್ದವರು ಮೊದಲಿಗೆ ಬೌಲಿಂಗ್ ಆರಿಸಿಕೊಂಡಿದ್ದೇ ಹೆಚ್ಚು.

ಇದುವರೆಗೆ ಈ ಟೂರ್ನಿಯ 12 ಪಂದ್ಯಗಳಿಗೆ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಅದರಲ್ಲಿ 11 ಪಂದ್ಯಗಳಲ್ಲಿ ಗುರಿ ಬೆನ್ನತ್ತಿದ ತಂಡಗಳೇ ಗೆಲುವು ಸಾಧಿಸಿವೆ.

ಸೂಪರ್ 12ರ ಹಂತ ಮತ್ತು ಸೆಮಿಫೈನಲ್ ಸೇರಿದಂತೆ ಆಸ್ಟ್ರೇಲಿಯಾ ತಂಡವು ಐದು ಬಾರಿ ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಮಾತ್ರ ಟಾಸ್ ಸೋತು, ಮೊದಲು ಬ್ಯಾಟಿಂಗ್ ಮಾಡಿ ಸೋತಿತ್ತು.

ನ್ಯೂಜಿಲೆಂಡ್ ಟಾಸ್ ಗೆದ್ದ ಸಂದರ್ಭಗಳಲ್ಲಿ ಎರಡು ಬಾರಿ ಮೊದಲು ಬ್ಯಾಟಿಂಗ್ ಮಾಡಿತ್ತು. ಅವೆರಡೂ ಮಧ್ಯಾಹ್ನದ ಪಂದ್ಯಗಳಾಗಿದ್ದವು. ಎರಡೂ ಸೆಮಿಫೈನಲ್‌ಗಳಲ್ಲಿ ಗುರಿ ಚೇಸ್‌ ಮಾಡಿದ ತಂಡಗಳೇ ಜಯಿಸಿದ್ದವು.

ಫೈನಲ್ ಪಂದ್ಯದಲ್ಲಿಯೂ ಟಾಸ್ ಗೆಲ್ಲುವ ತಂಡಕ್ಕೆ ಜಯದ ಅವಕಾಶ ಸಿಗುವುದೇ ಎಂಬ ಕುತೂಹಲ ಈಗ ಗರಿಗೆದರಿದೆ.

ಪಿಚ್ ಹೇಗಿದೆ?
ಪಂದ್ಯದ ಆರಂಭದಲ್ಲಿ ಬ್ಯಾಟರ್‌ಗಳು ಸ್ವಲ್ಪ ಎಚ್ಚರ ತಪ್ಪಿದರೂ ಮಧ್ಯಮವೇಗಿಗಳು ಮೇಲುಗೈ ಸಾಧಿಸುವ ಎಲ್ಲ ಸಾಧ್ಯತೆಗೂ ಇಲ್ಲಿವೆ. ಈ ಸವಾಲು ಮೀರಿದರೆ ದೊಡ್ಡ ಮೊತ್ತ ಗಳಿಸಲು ಬ್ಯಾಟರ್‌ಗಳಿಗೆ ಸಾಧ್ಯವಿದೆ. ಆದರೆ, ರಾತ್ರಿಯ ಇಬ್ಬನಿಯಲ್ಲಿ ಬೌಲಿಂಗ್ ಮಾಡುವ ಸವಾಲು ಎದುರಿಸಲು ಬೌಲರ್‌ಗಳು ಸಿದ್ಧರಾಗುವುದು ಅನಿವಾರ್ಯ.

ತಂಡಗಳು
ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್, ಆ್ಯಡಂ ಜಂಪಾ, ಆ್ಯಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್. ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಪಿಪ್ಸನ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಡೆರಿಲ್ ಮಿಚೆಲ್, ಡೆವೊನ್ ಕಾನ್ವೆ, ಜೇಮ್ಸ್ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್ , ಈಶ್ ಸೋಧಿ, ಟಿಮ್ ಸೌಥಿ, ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್‌ಮನ್, ಆ್ಯಡಂ ಮಿಲ್ನೆ, ಕೈಲ್ ಜಿಮಿಸನ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.