ADVERTISEMENT

T20 WC: ಕ್ಯಾಚ್ ಕೈಬಿಟ್ಟ ಹಸನ್ ಅಲಿ; ವಿಶ್ವಕಪ್ ಕೈಚೆಲ್ಲಿದ ಪಾಕಿಸ್ತಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2021, 7:09 IST
Last Updated 12 ನವೆಂಬರ್ 2021, 7:09 IST
ಕ್ಯಾಚ್ ಕೈಚೆಲ್ಲಿದ ಹಸನ್ ಅಲಿ
ಕ್ಯಾಚ್ ಕೈಚೆಲ್ಲಿದ ಹಸನ್ ಅಲಿ   

ದುಬೈ:ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿರುವ ಪಾಕಿಸ್ತಾನದ ವಿಶ್ವಕಪ್ ಟ್ರೋಫಿ ಕನಸು ಭಗ್ನಗೊಂಡಿದೆ.

ಕೊನೆಯ ಹಂತದವರೆಗೂ ಪಂದ್ಯ ಪಾಕಿಸ್ತಾನದ ಹಿಡಿತದಲ್ಲಿತ್ತು. ಅಂತಿಮ ಐದು ಓವರ್‌ಗಳಲ್ಲಿ ಆಸೀಸ್ ಗೆಲುವಿಗೆ 62 ರನ್ ಬೇಕಾಗಿತ್ತು.

ಆದರೆ ಮುರಿಯದ ಆರನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ಕಟ್ಟಿದ ಮಾರ್ಕಸ್ ಸ್ಟೋಯಿನಿಸ್ ಹಾಗೂ ಮ್ಯಾಥ್ಯೂ ವೇಡ್, ಪಾಕಿಸ್ತಾನದಿಂದ ಗೆಲುವನ್ನು ಕಸಿದುಕೊಂಡರು.

ಈ ಪೈಕಿ ಶಾಹೀನ್ ಅಫ್ರಿದಿ ಅವರ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಜೀವದಾನ ಪಡೆದ ಮ್ಯಾಥ್ಯೂ ವೇಡ್, ಸತತ ಮೂರು ಸಿಕ್ಸರ್ ಬಾರಿಸಿ ಆಸೀಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

19ನೇ ಓವರ್‌ನ ಮೂರನೇ ಎಸೆತದಲ್ಲಿ ವೇಡ್ ಹೊಡೆದ ಚೆಂಡನ್ನು ಕ್ಯಾಚ್ ಹಿಡಿಯುವಲ್ಲಿ ಹಸನ್ ಅಲಿ ವಿಫಲರಾದರು. ಇದರ ಸ್ಪಷ್ಟ ಲಾಭ ಪಡೆದ ವೇಡ್, ಬಳಿಕದ ಮೂರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು. 'ಸ್ಕೂಪ್' ಮಾಡುವ ಮೂಲಕ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದರು ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಒಟ್ಟಿನಲ್ಲಿ ಹಸನ್ ಅಲಿ ಕೈಚೆಲ್ಲಿರುವ ಕ್ಯಾಚ್‌ಗಾಗಿ ಪಾಕಿಸ್ತಾನ ದೊಡ್ಡ ಬೆಲೆಯನ್ನೇ ತೆರಬೇಕಾಯಿತು. ಇದರೊಂದಿಗೆ ವಿಶ್ವಕಪ್ ಕನಸು ಭಗ್ನಗೊಂಡಿದೆ.

ಪ್ರಸ್ತುತ ಹಸನ್ ಅಲಿ ಕ್ಯಾಚ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.