ಮುಂಬೈ: ‘ಅಮೆರಿಕದಲ್ಲಿ ನಾವು ಕ್ರಿಕೆಟ್ ಆಡುತ್ತೇವೆ ಎಂದೂ ಊಹಿಸಿರಲೂ ಇಲ್ಲ. ಇದೀಗ ಅಂತಹದೊಂದು ಅವಕಾಶ ಕೂಡಿಬಂದಿದೆ. ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ಜಗತ್ತಿನಲ್ಲಿ ವೃದ್ಧಿಸುತ್ತಿರುವ ಕ್ರಿಕೆಟ್ ಜನಪ್ರಿಯತೆಯನ್ನು ತೋರಿಸುತ್ತದೆ’ ಎಂದು ಭಾರತ ತಂಡದ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.
ವೆಸ್ಟ್‌ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ಭಾನುವಾರದಿಂದ ಟೂರ್ನಿ ಆರಂಭಗೊಳ್ಳಲಿದೆ. ಕೊಹ್ಲಿ ಶುಕ್ರವಾರ ಸಂಜೆ ನ್ಯೂಯಾರ್ಕ್‌ಗೆ ಬಂದಿಳಿದಿದ್ದು, ಶನಿವಾರ ಅಭ್ಯಾಸ ಆರಂಭಿಸಿದರು.
‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಮೆರಿಕದಲ್ಲಿ ನಾವು ಕ್ರಿಕೆಟ್ ಆಡಲಿದ್ದೇವೆ ಎಂದು ಅಂದುಕೊಂಡಿರಲಿಲ್ಲ. ಆದರೆ ಅದು ಈಗ ನಿಜವಾಗಿದೆ‘ ಎಂದು ವಿರಾಟ್ ಹೇಳಿರುವ ವಿಡಿಯೊವನ್ನು ಮುಂಬೈಯಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯು ಹಂಚಿಕೊಂಡಿದೆ.
‘ಕ್ರಿಕೆಟ್ ಜನಪ್ರಿಯತೆ ಮತ್ತು ಪ್ರಭಾವ ಹೆಚ್ಚುತ್ತಿವೆ. ಈ ಬದಲಾವಣೆಯನ್ನು ಸ್ವೀಕರಿಸಲು ಅಮೆರಿಕ ಸಿದ್ಧವಾಗಿದೆ. ವಿಶ್ವಕಪ್ ಆಯೋಜನೆಯ ಮೂಲಕ ಕ್ರಿಕೆಟ್ ಮತ್ತಷ್ಟು ಜನಪ್ರಿಯಗೊಳ್ಳಲು ನೆರವಾಗಲಿದೆ’ ಎಂದು ಕೊಹ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
‘ಇದು ಉತ್ತಮ ಆರಂಭ ಎಂದು ಬಣ್ಣಿಸಿದ ಕೊಹ್ಲಿ, ವಿಶ್ವದ ಇತರ ಭಾಗಗಳಲ್ಲಿಯೂ ಐಸಿಸಿಯು ಕ್ರಿಕೆಟ್ ಆಟವನ್ನು ಉತ್ತೇಜಿಸುವ ಮತ್ತು ವಿಸ್ತರಿಸುವ ಗುರಿ ಹೊಂದಿರುವುದರಿಂದ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಮಹತ್ವದ ಪಾತ್ರವಹಿಸಲಿದೆ. ಅಮೆರಿಕದಲ್ಲಿ ನೆಲೆಸಿರುವ ದಕ್ಷಿಣ ಏಷ್ಯಾ ಪ್ರದೇಶದ ಜನರು ಈ ಕ್ರೀಡೆಯನ್ನು ಬೆಳೆಸಲು ಸಮರ್ಥರಾಗಿದ್ದಾರೆ’ ಎಂದರು.
ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.