ADVERTISEMENT

T20 WC IND vs BAN | ಹಾರ್ದಿಕ್ ಆಲ್‌ರೌಂಡ್ ಆಟ: ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:05 IST
Last Updated 22 ಜೂನ್ 2024, 14:05 IST
<div class="paragraphs"><p>ಭಾರತ ಕ್ರಿಕೆಟ್‌ ತಂಡದ ಆಟಗಾರರು</p></div>

ಭಾರತ ಕ್ರಿಕೆಟ್‌ ತಂಡದ ಆಟಗಾರರು

   

ನಾರ್ತ್‌ಸೌಂಡ್: ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಆಟ ರಂಗೇರಿತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅಜೇಯ ಓಟವೂ ಮುಂದುವರಿಯಿತು. 

ಸೂಪರ್ 8ರ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 50 ರನ್‌ಗಳಿಂದ ಜಯಭೇರಿ ಬಾರಿಸಿದ ಭಾರತ ತಂಡವು ಸೆಮಿಫೈಲ್‌ನತ್ತ ಮತ್ತೊಂದು ಹೆಜ್ಜೆ ಇಟ್ಟಿತು. ಈ ಹಂತದಲ್ಲಿ ಭಾರತಕ್ಕೆ ಇನ್ನೊಂದು ಪಂದ್ಯ (ಆಸ್ಟ್ರೇಲಿಯಾ ಎದುರು) ಮಾತ್ರ ಬಾಕಿ ಇದೆ. ಈ ಟೂರ್ನಿಯ ಗುಂಪು ಮತ್ತು ಸೂಪರ್ 8ರ ಘಟ್ಟದಲ್ಲಿ ರೋಹಿತ್ ಶರ್ಮಾ ಬಳಗವು ಒಂದೂ ಪಂದ್ಯದಲ್ಲಿ ಸೋತಿಲ್ಲ. ಆದರೆ ಬಾಂಗ್ಲಾದೇಶ ತಂಡವು ಆಡಿದ ಎರಡೂ ಪಂದ್ಯಗಳಲ್ಲಿ ಪರಾಭವಗೊಂಡು ನಿರ್ಗಮಿಸಿತು. 

ADVERTISEMENT

ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ ಆರಂಭಿಕ ಹಂತದಲ್ಲಿ ತುಸು ಹಿಡಿತ ಸಾಧಿಸುವಲ್ಲಿಯೂ ಯಶಸ್ವಿಯಾಯಿತು. ಆದರೆ 6ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಹಾರ್ದಿಕ್ (ಅಜೇಯ 50; 27ಎ, 4X4, 6X3) ಅವರ ಮಿಂಚಿನ ಆಟದ ಬಲದಿಂದ ಭಾರತವು   20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 196 ರನ್‌ ಗಳಿಸಿತು. ಚೆಂದದ ಡ್ರೈವ್ ಮತ್ತು ಕಟ್‌ಗಳ ಮೂಲಕ ಹಾರ್ದಿಕ್ ಗಳಿಸಿದ ಬೌಂಡರಿಗಳು ಸೊಗಸಾಗಿದ್ದವು. 

ಗುರಿ ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಮೊದಲ ಆಘಾತ ನೀಡಿದವರೂ ಹಾರ್ದಿಕ್.  ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದ್ದ ಲಿಟನ್ ದಾಸ್ (13; 10ಎ)  ವಿಕೆಟ್ ಕಬಳಿಸಿದ ಹಾರ್ದಿಕ್ ಬಾಂಗ್ಲಾ ಪತನಕ್ಕೆ ಮುನ್ನುಡಿ ಬರೆದರು. ಅರ್ಷದೀಪ್ ಸಿಂಗ್ (30ಕ್ಕೆ2), ಜಸ್‌ಪ್ರೀತ್ ಬೂಮ್ರಾ (13ಕ್ಕೆ2) ಹಾಗೂ ಕುಲದೀಪ್ ಯಾದವ್ (19ಕ್ಕೆ3) ಅವರ ದಾಳಿಯ ಮುಂದೆ ಬಾಂಗ್ಲಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 146 ರನ್‌ ಗಳಿಸಲಷ್ಟೇ ಶಕ್ತವಾಯಿತು. 

ವಿರಾಟ್ ಚೇತರಿಕೆ: ಟೂರ್ನಿಯ ಗುಂಪು ಹಂತದ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಇಲ್ಲಿ ತುಸು ಚೇತೋಹಾರಿ ಆಟವಾಡಿದರು. ರೋಹಿತ್ ಶರ್ಮಾ (23; 11ಎ) ಅವರೊಂದಿಗಿನ ಮೊದಲ ವಿಕೆಟ್‌ ಜೊತೆಯಾಟದಲ್ಲಿ ವಿರಾಟ್ 39 ರನ್ ಸೇರಿಸಿದರು. 

2ನೇ ವಿಕೆಟ್‌ ಜೊತೆಯಾಟದಲ್ಲಿ ವಿರಾಟ್ ಹಾಗೂ ರಿಷಭ್ ಪಂತ್ (36; 24ಎ) ಅವರು 32  ರನ್ ಸೇರಿಸಿದರು.  ಆದರೆ ಒಂಬತ್ತನೇ ಓವರ್ ಹಾಕಿದ ಹಸನ್ ಶಕೀಬ್ ಅವರು ವಿರಾಟ್ ಕೊಹ್ಲಿ ಓಟಕ್ಕೆ ತಡೆಯೊಡ್ಡಿದರು. ಅದೇ ಓವರ್‌ನ ಇನ್ನೊಂದು ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಔಟಾದರು. ಪಂತ್ ತಮ್ಮ ಆಟದಲ್ಲಿ ಎರಡು ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿದರು. 24 ಎಸೆತಗಳಲ್ಲಿ 36 ರನ್ ಹೊಡೆದರು. ಆಗಿನ್ನೂ ತಂಡದ ಮೊತ್ತ  100 ರನ್ ಕೂಡ ದಾಟಿರಲಿಲ್ಲ.

ಈ ಹಂತದಲ್ಲಿ ಕ್ರೀಸ್‌ಗೆ ಬಂದ ಶಿವಂ ದುಬೆ (34; 24ಎ) ಮತ್ತು ಅವರೊಂದಿಗೆ ಬಂದ ಹಾರ್ದಿಕ್ ಅವರಿಬ್ಬರೂ ಬೌಲರ್‌ಗಳ ಮೇಲೆ ಪ್ರಹಾರ ಆರಂಭಿಸಿದರು.  ರಿಷದ್‌ ಹುಸೇನ್ ಹಾಕಿದ  ಓವರ್‌ನಲ್ಲಿ ಶಿವಂ ಕ್ಲೀನ್‌ಬೌಲ್ಡ್ ಆಗುವುದರೊಂದಿಗೆ ಜೊತೆಯಾಟ ಮುರಿಯಿತು. ಹಾರ್ದಿಕ್ 27 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದು ಅವರ 4ನೇ ಅರ್ಧಶತಕವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.