ADVERTISEMENT

ಪಾಕ್ ವಿರುದ್ಧದ ಪಂದ್ಯದಲ್ಲಿ ಯಾವುದೇ ವಿಭಿನ್ನತೆಯಿಲ್ಲ: ವಿರಾಟ್ ಕೊಹ್ಲಿ

ಪಿಟಿಐ
Published 17 ಅಕ್ಟೋಬರ್ 2021, 10:47 IST
Last Updated 17 ಅಕ್ಟೋಬರ್ 2021, 10:47 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ದುಬೈ: ಟ್ವೆಂಟಿ-20 ವಿಶ್ವಕಪ್‌‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಕುರಿತು ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಮ್ಮ ಪಾಲಿಗಿದು ಮತ್ತೊಂದು ಪಂದ್ಯ ಮಾತ್ರವಾಗಿರಲಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 24ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಸವಾಲನ್ನು ಎದುರಿಸಲಿದೆ. ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಎಂದಿಗೂ ಸೋತಿಲ್ಲ. ಅಲ್ಲದೆ ಅಭಿಮಾನಿಗಳಲ್ಲಿ ಈಗಿನಿಂದಲೇ ರೋಚಕತೆ ಮನೆ ಮಾಡಿದ್ದು, ಟಿಕೆಟ್‌ಗಳಿಗೂ ಭಾರಿ ಬೇಡಿಕೆ ಕಂಡುಬಂದಿದೆ.

ಆದರೆ ಓರ್ವ ವೃತ್ತಿಪರ ಆಟಗಾರನಾಗಿ ಕೊಹ್ಲಿ ಆಟದ ಕಡೆ ಮಾತ್ರ ಗಮನ ಕೇಂದ್ರಿಕರಿಸಲು ಬಯಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯ ವಿಭಿನ್ನವಾಗಿ ಅನಿಸುತ್ತಿದೆಯೇ ಎಂದು ಕೇಳಿದಾಗ 'ಪ್ರಾಮಾಣಿಕವಾಗಿಯೂ ಎಂದಿಗೂ ಹಾಗೆ ಭಾವಿಸಿಲ್ಲ' ಎಂದು ಉತ್ತರಿಸಿದ್ದಾರೆ.

'ನಾನು ಪಾಕ್ ವಿರುದ್ಧದ ಪಂದ್ಯವನ್ನು ಮತ್ತೊಂದು ಪಂದ್ಯವಾಗಿ ಮಾತ್ರ ಪರಿಗಣಿಸಿದ್ದೇನೆ. ಆ ಪಂದ್ಯದ ಸುತ್ತಲೂ ಕಾವೇರಿದ ವಾತಾವರಣವಿದೆ ಎಂಬುದು ನನಗೆ ತಿಳಿದಿದೆ. ಟಿಕೆಟ್‌ಗಳಿಗೂ ಹೆಚ್ಚಿನ ಬೇಡಿಕೆಯಿದೆ' ಎಂದು ತಿಳಿಸಿದ್ದಾರೆ.

'ಟಿಕೆಟ್‌ಗಳ ಬೇಡಿಕೆಯು ಹೆಚ್ಚಾಗಿದೆ. ನನ್ನ ಸ್ನೇಹಿತರು ಟಿಕೆಟ್‌ಗಾಗಿ ಬೇಡಿಕೆಯಿರಿಸಿದ್ದಾರೆ. ಆದರೆ ಅವರಿಗೆಲ್ಲ ನಾನು 'ನೊ' ಎಂದಿದ್ದೇನೆ' ಎಂದು ನಗುಮುಖದಿಂದಲೇ ಉತ್ತರಿಸಿದರು.

'ಇದರ ಹೊರತಾಗಿ ಈ ಪಂದ್ಯದಲ್ಲಿ ಬೇರೆ ಏನಾದರೂ ವಿಭಿನ್ನತೆಯಿದೆ ಎಂದು ನಾನು ಭಾವಿಸುತ್ತಿಲ್ಲ. ಇದು ಕ್ರಿಕೆಟ್ ಪಂದ್ಯವಾಗಿದ್ದು, ನಮಗೆ ಗೊತ್ತಿರುವ ಹಾಗೆಯೇ ಉತ್ತಮ ಕ್ರೀಡಾಸ್ಫೂರ್ತಿಯಿಂದ ಆಡಬೇಕಿದೆ' ಎಂದರು.

'ಹೌದು, ಹೊರಗಿನ ವಾತಾವರಣವು ವಿಭಿನ್ನವಾಗಿದೆ ಎಂದು ನೀವು ಹೇಳಬಹುದು. ಅಭಿಮಾನಿಗಳ ದೃಷ್ಟಿಕೋನದಿಂದಲೂ ಖಂಡಿತವಾಗಿಯೂ ತುಂಬಾನೇ ಉತ್ಸಾಹಿತರಾಗಿದ್ದಾರೆ. ಆದರೆ ನಾವು ಸಾಧ್ಯವಾದಷ್ಟು ವೃತ್ತಿಪರರಾಗಿ ಉಳಿಯಲು ಪ್ರಯತ್ನಿಸುತ್ತೇವೆ. ಹಾಗೆಯೇ ಸಹಜ ದೃಷ್ಟಿಕೋನದಿಂದಲೇ ಪಂದ್ಯವನ್ನು ಎದುರಿಸುತ್ತೇವೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.