ಅಡಿಲೇಡ್: ವಿಶ್ವಕಪ್ ಒಳಗೊಂಡಂತೆ ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ಪದೇ ಪದೇ ವೈಫಲ್ಯ ಅನುಭವಿಸುವುದಕ್ಕೆ ದಕ್ಷಿಣ ಆಫ್ರಿಕಾ ತಂಡಕ್ಕೆ ‘ಚೋಕರ್’ ಎಂಬ ಹಣೆಪಟ್ಟಿ ಲಭಿಸಿತ್ತು. ಈ ಬಾರಿಯೂ ಆ ಹಣೆಪಟ್ಟಿ ಕಳಚುವಲ್ಲಿ ತಂಡ ಎಡವಿತು.
ಭಾನುವಾರ ನಡೆದ ಟಿ20 ವಿಶ್ವಕಪ್‌ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ಎದುರು 13 ರನ್‌ಗಳಿಂದ ಆಘಾತ ಅನುಭವಿಸಿದ ತೆಂಬಾ ಬವುಮಾ ಬಳಗ, ಸೆಮಿಫೈನಲ್ ಕಾಣದೆಯೇ ಟೂರ್ನಿಯಿಂದ ಹೊರಬಿತ್ತು.
ಅಡಿಲೇಡ್ ಓವಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 158 ರನ್ ಗಳಿಸಿತು. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳಾದ ಸ್ಟೀಫನ್ ಮೈಬರ್ಗ್ (37 ರನ್, 30 ಎ.), ಮ್ಯಾಕ್ಸ್ ಒಡೌಡ್ (29 ರನ್, 31 ಎ.) ಟಾಮ್ ಕೂಪರ್ (35 ರನ್, 19 ಎ.) ಹಾಗೂ ಕಾಲಿನ್ ಆ್ಯಕರ್‌ಮನ್ (ಔಟಾಗದೆ 41, 21 ಎ.) ಅವರು ಉಪಯುಕ್ತ ಕೊಡುಗೆ ನೀಡಿದರು.
ದಕ್ಷಿಣ ಆಫ್ರಿಕಾ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ ಗಳಿಸಿದ್ದು 145 ರನ್ ಮಾತ್ರ. ಸೆಮಿ ಪ್ರವೇಶಿಸಲು ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ (13 ಎಸೆತಗಳಲ್ಲಿ 13) ಮತ್ತು ಬವುಮಾ (20 ಎಸೆತಗಳಲ್ಲಿ 20) ಬಿರುಸಿನ ಆರಂಭ ನೀಡುವಲ್ಲಿ ವಿಫಲರಾದರು.
ಮಧ್ಯಮ ಕ್ರಮಾಂಕದಲ್ಲಿ ರಿಲೀ ರೂಸೊ (25 ರನ್, 19 ಎ.), ಏಡನ್ ಮರ್ಕರಂ (17 ರನ್, 13 ಎ.) ಮತ್ತು ಡೇವಿಡ್ ಮಿಲ್ಲರ್ (17 ರನ್, 17 ಎ.) ಉತ್ತಮ ಆರಂಭ ಪಡೆದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಕೊನೆಯ ಕ್ರಮಾಂಕದ ಬ್ಯಾಟರ್‌ಗಳು ಒತ್ತಡ ಮೆಟ್ಟಿನಿಲ್ಲಲು ವಿಫಲವಾದ್ದರಿಂದ ತಂಡ ಸೋಲಿನ ಹಾದಿ ಹಿಡಿಯಿತು.
ಬ್ರೆಂಡನ್ ಗ್ಲೋವರ್ (9ಕ್ಕೆ 3) ಮತ್ತು ಫ್ರೆಡ್ ಕ್ಲಾಸೆನ್ (20ಕ್ಕೆ 2) ಸೇರಿದಂತೆ ನೆದರ್ಲೆಂಡ್ಸ್ ಬೌಲರ್‌ಗಳು ಬಿಗುವಾದ ದಾಳಿ ನಡೆಸಿ, ಎದುರಾಳಿ ಬ್ಯಾಟರ್‌ಗಳಿಗೆ ಬಿರುಸಿನ ಹೊಡೆತ ಗಳಿಸಲು ಅವಕಾಶ ನೀಡಲಿಲ್ಲ.
ನೆದರ್ಲೆಂಡ್ಸ್ ತಂಡಕ್ಕೆ ಯಾವುದೇ ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಲಭಿಸಿದ ಮೊದಲ ಗೆಲುವು ಇದು. ಈ ಸೋಲಿನೊಂದಿಗೆ ಬವುಮಾ ಬಳಗ ಐದು ಪಾಯಿಂಟ್ಸ್‌ಗಳೊಂದಿಗೆ ‘ಗುಂಪು 2’ ರಲ್ಲಿ ಮೂರನೇ ಸ್ಥಾನ ಪಡೆಯಿತು. ನಾಲ್ಕು ಪಾಯಿಂಟ್ಸ್ ಗಳಿಸಿದ ನೆದರ್ಲೆಂಡ್ಸ್ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಸಂಕ್ಷಿಪ್ತ ಸ್ಕೋರ್
ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 158 (ಸ್ಟೀಫನ್ ಮೈಬರ್ಗ್ 37, ಮ್ಯಾಕ್ಸ್ ಒಡೌಡ್ 29, ಟಾಮ್ ಕೂಪರ್ 35, ಕಾಲಿನ್ ಆ್ಯಕರ್‌ಮನ್ ಔಟಾಗದೆ 41, ಕೇಶವ್ ಮಹಾರಾಜ್ 27ಕ್ಕೆ 2, ಎನ್ರಿಚ್ ನಾಕಿಯಾ 10ಕ್ಕೆ 1, ಏಡನ್ ಮರ್ಕರಂ 16ಕ್ಕೆ 1)
ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 145 (ತೆಂಬಾ ಬವುಮಾ 20, ರಿಲೀ ರೊಸೊ 25, ಹೆನ್ರಿಚ್ ಕ್ಲಾಸೆನ್ 21, ಬ್ರೆಂಡನ್ ಗ್ಲೋವರ್ 9ಕ್ಕೆ 3, ಫ್ರೆಡ್ ಕ್ಲಾಸೆನ್ 20ಕ್ಕೆ 2, ಬಸ್ ಡಿ ಲೀಡ್ 25ಕ್ಕೆ 2)
ಫಲಿತಾಂಶ: ನೆದರ್ಲೆಂಡ್ಸ್‌ಗೆ 13 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.