ADVERTISEMENT

T20 WC : ಅಫ್ಗನ್ ವಿರುದ್ಧ ಕಿವೀಸ್‌ಗೆ ಜಯ; ಭಾರತದ ವಿಶ್ವಕಪ್ ಕನಸು ನುಚ್ಚುನೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2021, 13:19 IST
Last Updated 7 ನವೆಂಬರ್ 2021, 13:19 IST
ನ್ಯೂಜಿಲೆಂಡ್ ಆಟಗಾರರ ಸಂಭ್ರಮ
ನ್ಯೂಜಿಲೆಂಡ್ ಆಟಗಾರರ ಸಂಭ್ರಮ   

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಅಬುಧಾಬಿಯಲ್ಲಿ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಇದರೊಂದಿಗೆ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ. ಭಾರತ ಸೆಮಿಫೈನಲ್ ಪ್ರವೇಶಿಸಲು ಕಿವೀಸ್ ವಿರುದ್ಧದ ಪಂದ್ಯದಲ್ಲಿ ಅಫ್ಗನ್ ಗೆಲುವು ದಾಖಲಿಸಬೇಕಿತ್ತು. ಆದರೆ ಅಫ್ಗನ್ ಸೋಲುವುದರೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ತೇರ್ಗಡೆ ಹೊಂದುವಲ್ಲಿ ವಿಫಲವಾಗಿದೆ.

ಐದು ಪಂದ್ಯಗಳಲ್ಲಿ ನಾಲ್ಕನೇ ಗೆಲುವಿನೊಂದಿಗೆ ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿರುವ ಕೇನ್ ವಿಲಿಯಮ್ಸನ್ ಪಡೆ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತದ ಟಿ20 ವಿಶ್ವಕಪ್ ಗೆಲುವಿನ ಕನಸು ನುಚ್ಚುನೂರಾಗಿದೆ. ಪ್ರಸಕ್ತ ಸಾಗುತ್ತಿರುವ ವಿಶ್ವಕಪ್ ಬಳಿಕ ಟಿ20 ನಾಯಕತ್ವವನ್ನು ತೊರೆಯುವುದಾಗಿ ವಿರಾಟ್ ಘೋಷಿಸಿದ್ದರು.

ಇದೀಗ ಸೋಮವಾರ ನಡೆಯಲಿರುವ ಸೂಪರ್-12 ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡವು ನಮೀಬಿಯಾ ವಿರುದ್ಧ ಔಪಚಾರಿಕ ಪಂದ್ಯವನ್ನಷ್ಟೇ ಆಡಲಿದೆ.

ಅಫ್ಗಾನಿಸ್ತಾನ ತಂಡವು ಕೂಡ ಸೆಮಿಫೈನಲ್ ಪ್ರವೇಶಿಸಲು ಕಿವೀಸ್ ವಿರುದ್ಧ ಬೃಹತ್ ಗೆಲುವು ದಾಖಲಿಸಬೇಕಿತ್ತು. ಆದರೆ ಅಫ್ಗನ್ ಒಡ್ಡಿದ 125 ರನ್ ಗೆಲುವಿನ ಗುರಿಯನ್ನು ನ್ಯೂಜಿಲೆಂಡ್ 18.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಲುಪಿತು. ಈ ಮೂಲಕ ಅಫ್ಗಾನಿಸ್ತಾನವು ನಿರ್ಗಮಿಸಿದೆ.

ನಾಯಕ ಕೇನ್ ವಿಲಿಯಮ್ಸನ್ (40*), ಡೆವೊನ್ ಕಾನ್ವೆ (36*) ಹಾಗೂ ಮಾರ್ಟಿನ್ ಗಪ್ಟಿಲ್ (28) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ಕಿವೀಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಗಾನಿಸ್ತಾನ ನಜೀಬ್ ಉಲ್ಲ ಜದ್ರಾನ್ ಬಿರುಸಿನ ಅರ್ಧಶತಕದ (73) ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಅಫ್ಗನ್ ಆರಂಭ ಉತ್ತಮವಾಗಿರಲಿಲ್ಲ. 19 ರನ್ ಗಳಿಸುವಷ್ಟರಲ್ಲಿ ಹಜರತ್ ಉಲ್ಲ ಜಜಾಯ್ (2), ಮೊಹಮ್ಮದ್ ಶಹಜಾದ್ (4) ಹಾಗೂ ರಹಮಾನ್ ಉಲ್ಲ ಗುರ್ಬಜ್ (6) ವಿಕೆಟ್‌ಗಳನ್ನು ಕಳೆದುಕೊಂಡಿತು. ಗುಲ್ಬದಿನ್ ನಯೀಬ್ (15) ಅವರಿಗೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.

ಆದರೆ ಒಂದೆಡೆ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ಕ್ರೀಸಿನಲ್ಲಿ ನೆಲೆಯೂರಿ ನಿಂತ ನಜೀಬ್ ಉಲ್ಲ ಜದ್ರಾನ್, ಕೌಂಟರ್ ಅಟ್ಯಾಕ್ ಮಾಡಿದರು. ಅಲ್ಲದೆ ನಾಯಕ ಮೊಹಮ್ಮದ್ ನಬಿ ಜೊತೆಗೂಡಿ ತಂಡವನ್ನು ಮುನ್ನಡೆಸಿದರು.

ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ನಜೀಬ್ 33 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು. ನಜೀಬ್ ಹಾಗೂ ನಬಿ ಐದನೇ ವಿಕೆಟ್‌ಗೆ 59 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಆದರೆ ಕೊನೆಯ ಹಂತದಲ್ಲಿ ನಜೀಬ್ ಹಾಗೂ ನಬಿ ವಿಕೆಟ್ ನಷ್ಟವಾಗುವುದರೊಂದಿಗೆ ಅಫ್ಗಾನಿಸ್ತಾನ ಹಿನ್ನಡೆ ಅನುಭವಿಸಿತು. 48 ಎಸೆತಗಳನ್ನು ಎದುರಿಸಿದ ನಜೀಬ್ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು. ನಾಯಕ ನಬಿ 14 ರನ್ ಗಳಿಸಿ ಔಟ್ ಆದರು. ಇನ್ನುಳಿದಂತೆ ಕರಿಮ್ ಜನ್ನತ್ 2 ಹಾಗೂ ರಶೀದ್ ಖಾನ್ 3 ರನ್ ಗಳಿಸಿದರು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ಮೂರು ಹಾಗೂ ಟಿಮ್ ಸೌಥಿ ಎರಡು ವಿಕೆಟ್ ಕಬಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.