ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ.
ಇದರೊಂದಿಗೆ ಸತತ ಎರಡನೇ ಸೋಲಿನ ಮುಖಭಂಗಕ್ಕೊಳಗಾಗಿರುವ ಟೀಮ್ ಇಂಡಿಯಾ, ಸೆಮಿಫೈನಲ್ ಕನಸು ಬಹುತೇಕ ಅಸ್ತಮಿಸಿದೆ. ಈ ಮೊದಲು ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲೂ ಹೀನಾಯ ಸೋಲಿಗೆ ಒಳಗಾಗಿತ್ತು.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯವು ಕ್ವಾರ್ಟರ್ ಫೈನಲ್ ಮಹತ್ವವನ್ನು ಪಡೆದುಕೊಂಡಿತ್ತು. ಟಾಸ್ ಅದೃಷ್ಟ ಕೂಡ ಭಾರತಕ್ಕೆ ಸಾಥ್ ಕೊಡಲಿಲ್ಲ. ಬ್ಯಾಟರ್‌ಗಳು ಯಾವ ಹಂತದಲ್ಲೂ ಬದ್ಧತೆಯನ್ನು ಪ್ರದರ್ಶಿಸಲಿಲ್ಲ. ದೇಹಭಾಷೆಯಲ್ಲೂ ಅದು ವ್ಯಕ್ತವಾಗಲಿಲ್ಲ.
ದುಬೈ ಪಿಚ್‌ನಲ್ಲಿ ಐಪಿಎಲ್ ಸೇರಿದಂತೆ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಆಡುತ್ತಿದ್ದರೂ ಪಿಚ್ ಗತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ಯಾವ ಹಂತದಲ್ಲೂ ಎದುರಾಳಿಗೆ ಸವಾಲಾಗಲೇ ಇಲ್ಲ.
ಭಾರತದ ಘಟಾನುಘಟಿ ಬ್ಯಾಟರ್‌ಗಳು ಕೆಟ್ಟ ಪ್ರದರ್ಶನವನ್ನು ನೀಡುವುದರೊಂದಿಗೆ ಭಾರತದ ಸೆಮೀಸ್ ಪ್ರವೇಶ ಕನಸು ಸಹ ಕ್ಷೀಣಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ ಏಳು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಲಷ್ಟೇ ಸಮರ್ಥವಾಯಿತು. ಬಳಿಕ ಗುರಿ ಬೆನ್ನತ್ತಿದ್ದ ಕಿವೀಸ್ 14.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಡೆರಿಲ್ ಮಿಚೆಲ್ (49), ಕೇನ್ ವಿಲಿಯಮ್ಸನ್ (33*), ಹಾಗೂ ಮಾರ್ಟಿನ್ ಗಪ್ಟಿಲ್ (20) ಉಪಯುಕ್ತ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಸುಲಭ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.
ಈ ಮೊದಲು ಅಚ್ಚರಿಯೆಂಬಂತೆ ರೋಹಿತ್ ಶರ್ಮಾ ಸ್ಥಾನದಲ್ಲಿ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿದರು. ಆದರೂ ಟೀಮ್ ಇಂಡಿಯಾದ ಅದೃಷ್ಟ ಬದಲಾಗಲಿಲ್ಲ. ಕೇವಲ 4 ರನ್ ಗಳಿಸಿ ಔಟ್ ಆದರು.
ಕೆ.ಎಲ್. ರಾಹುಲ್ (18) ಮಗದೊಮ್ಮೆ ನಿರಾಸೆ ಮೂಡಿಸಿದರು. ಮೊದಲ ಎಸೆತದಲ್ಲೇ ಜೀವದಾನ ಪಡೆದರೂ ಅದರ ಸಂಪೂರ್ಣ ಲಾಭ ಪಡೆಯಲು ರೋಹಿತ್ ಶರ್ಮಾಗೆ (14) ಸಾಧ್ಯವಾಗಲಿಲ್ಲ. ನಾಯಕ ವಿರಾಟ್ ಕೊಹ್ಲಿ ಸಹ (9) ಹೆಚ್ಚು ಹೊತ್ತು ನಿಲ್ಲಲಿಲ್ಲ.
ರಿಷಭ್ ಪಂತ್ (12) ಸಹ ಪೆವಿಲಿಯನ್ ಸೇರುವುದರೊಂದಿಗೆ 70 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು. ಹಾರ್ದಿಕ್ ಪಾಂಡ್ಯ (23) ನೈಜ ಫಾರ್ಮ್‌ಗೆ ಮರಳಿಲಿಲ್ಲ.
ಕೊನೆಯ ಹಂತದಲ್ಲಿ ರವೀಂದ್ರ ಜಡೇಜ ಮಾತ್ರ ಅಲ್ಪ ಹೋರಾಟದ ಮನೋಭಾವವನ್ನು ತೋರಿದರು. ಆದರೂ ಏಳು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಲಷ್ಟೇ ಸಾಧ್ಯವಾಯಿತು. 19 ಎಸೆತಗಳನ್ನು ಎದುರಿಸಿದ ಜಡೇಜ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಔಟಾಗದೆ ಉಳಿದರು.
ಕಿವೀಸ್ ಪರ ಟ್ರೆಂಟ್ ಬೌಲ್ಟ್ ಮೂರು ಮತ್ತು ಇಶ್ ಸೋಧಿ ಎರಡು ವಿಕೆಟ್ ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.