ದುಬೈ: ಪಂದ್ಯ ಗೆಲ್ಲಿಸಿದ ಬಳಿಕ ಮಹೇಂದ್ರ ಸಿಂಗ್ ಧೋನಿ ಶೈಲಿಯಲ್ಲಿ ಸಂಭ್ರಮ ಆಚರಿಸುವ ಮೂಲಕ ಪಾಕಿಸ್ತಾನದ ಆಸಿಫ್ ಅಲಿ ಗಮನ ಸೆಳೆದಿದ್ದಾರೆ.
ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ಅಫ್ಗಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಆಸಿಫ್ ಅಲಿ, ಪಾಕಿಸ್ತಾನದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಪಂದ್ಯ ಗೆದ್ದ ಬಳಿಕ ಧೋನಿ ರೀತಿಯಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸುವ ರೀತಿಯಲ್ಲಿ ಬ್ಯಾಟ್ ತೋರಿಸುತ್ತಾ ಸಂಭ್ರಮ ಆಚರಿಸಿದ್ದಾರೆ. ಏಳು ಎಸೆತಗಳನ್ನು ಎದುರಿಸಿ ಆಸಿಫ್ 25 ರನ್ ಗಳಿಸಿ ಔಟಾಗದೆ ಉಳಿದರು.
ತಮ್ಮ ವೃತ್ತಿ ಜೀವನದ ಆರಂಭದಕಾಲಘಟ್ಟದಲ್ಲಿ ಉದ್ದನೆಯ ಕೂದಲು ಬೆಳೆಸಿದ್ದ ಧೋನಿ, ಪಂದ್ಯ ಗೆದ್ದಾಗ ವಿಭಿನ್ನ ರೀತಿಯಲ್ಲಿ ಸಂಭ್ರಮವನ್ನು ಆಚರಿಸುತ್ತಿದ್ದರು.
16 ವರ್ಷಗಳ ಹಿಂದೆ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅಜೇಯ 183 ರನ್ ಗಳಿಸಿದ್ದ ಧೋನಿ, ಪಿಸ್ತೂಲ್‌ನಿಂದ ಗುಂಡು ಹಾರಿಸುವ ಶೈಲಿಯಲ್ಲಿ ಸಂಭ್ರಮವನ್ನು ಆಚರಿಸಿದ್ದರು.
ಈಗ ಆಸಿಫ್ ಇದಕ್ಕೆ ಸಮಾನವಾದ ರೀತಿಯಲ್ಲಿ ಸಂಭ್ರಮವನ್ನು ಆಚರಿಸಿರುವ ಚಿತ್ರಗಳನ್ನುಅಭಿಮಾನಿಗಳು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.