ADVERTISEMENT

ಟಿ20 ವಿಶ್ವಕಪ್: ಸೆಮಿಗೆ ಸನಿಹವಾಗುವತ್ತ ಭಾರತ ಚಿತ್ತ

ರೋಹಿತ್ ಶರ್ಮಾ ಪಡೆಗೆ ಬಾಂಗ್ಲಾದೇಶ ಸವಾಲು ಇಂದು; ಲಯಕ್ಕೆ ಮರಳುವ ಛಲದಲ್ಲಿ ವಿರಾಟ್, ದುಬೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 0:30 IST
Last Updated 22 ಜೂನ್ 2024, 0:30 IST
ಹಾರ್ದಿಕ್ ಪಾಂಡ್ಯ 
ಹಾರ್ದಿಕ್ ಪಾಂಡ್ಯ    

ನಾರ್ತ್‌ಸೌಂಡ್, ಆ್ಯಂಟಿಗಾ : ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸುವ ಛಲದಲ್ಲಿದೆ. ಶನಿವಾರ ಇಲ್ಲಿ ನಡೆಯಲಿರುವ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದು ಸೆಮಿಫೈನಲ್‌ ಹಾದಿಯನ್ನು ಸುಗಮಗೊಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಗುಂಪು ಹಂತದಲ್ಲಿ ಮತ್ತು ಎಂಟರ ಘಟ್ಟದ ಮೊದಲ ಪಂದ್ಯದಲ್ಲಿ ಸೋಲಿಲ್ಲದೇ ಮುನ್ನುಗ್ಗುತ್ತಿರುವ ಭಾರತ ತಂಡವು ಈ ಪಂದ್ಯದಲ್ಲಿ ಜಯಿಸುವ ನೆಚ್ಚಿನ ತಂಡವಾಗಿದೆ. ಬಾಂಗ್ಲಾ ತಂಡವು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋತಿದೆ. ಆದ್ದರಿಂದ ಇನ್ನುಳಿದಿರುವ ಎರಡೂ ಪಂದ್ಯಗಳಲ್ಲಿ ಜಯಿಸುವ ಒತ್ತಡದಲ್ಲಿದೆ.

ಭಾರತ ಹಾಗೂ ಬಾಂಗ್ಲಾ ತಂಡಗಳ ಬಲಾಬಲದ ಇತಿಹಾಸ ನೋಡಿದರೆ ಭಾರತ ತಂಡವೇ ಹೆಚ್ಚು ಸಲ ಜಯಿಸಿದೆ. ಆದರೆ ಬಾಂಗ್ಲಾ ತಂಡವು ಅಚ್ಚರಿಯ ಫಲಿತಾಂಶ ನೀಡುವುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ರೋಹಿತ್ ಬಳಗವು ಇಲ್ಲಿಯವರೆಗೆ ಮಾಡಿರುವ ಲೋಪಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಬೇಕಿದೆ. 

ADVERTISEMENT

ಪ್ರಮುಖವಾಗಿ ಅಗ್ರಕ್ರಮಾಂಕದ ಬ್ಯಾಟಿಂಗ್‌ ಬಲಿಷ್ಠಗೊಳ್ಳಬೇಕಾಗಿದೆ. ಅನುಭವಿ ಜೋಡಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಅವರು ಅಫ್ಗನ್ ತಂಡದ ಎದುರಿನ ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಆಡಿರಲಿಲ್ಲ. ರನ್‌ ಗಳಿಕೆಯ ವೇಗ ಕಡಿಮೆಯಿತ್ತು. ರಿಷಭ್ ಪಂತ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದು ರನ್‌ ವೇಗ ಹೆಚ್ಚಿಸಿದರು. ಆದರೆ, ದೀರ್ಘ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು. ಆದರೆ ರಿಷಭ್ ಅವರು ವಿಕೆಟ್‌ಕೀಪಿಂಗ್‌ನಲ್ಲಿ ಮೂರು ಕ್ಯಾಚ್ ಪಡೆದು ಮಿಂಚಿದರು. 

ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಬೀಸಾಟದಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಿತು. ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರ ನಿಖರ ದಾಳಿಯ ಮುಂದೆ ಅಫ್ಗನ್ ಬ್ಯಾಟಿಂಗ್ ಪಡೆ ಶರಣಾಯಿತು. 

ಆದರೆ ಶಿವಂ ದುಬೆ ಕೇವಲ ಒಂದು ಸಿಕ್ಸರ್ ಮಾತ್ರ ಗಳಿಸಿದ್ದರು. ಅವರು ತಮ್ಮ ನೈಜ ಲಯಕ್ಕೆ ಮರಳಿದರೆ ಎದುರಾಳಿ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು. 

ಬಾಂಗ್ಲಾ ತಂಡದ ಬೌಲಿಂಗ್ ಪಡೆ ಉತ್ತಮವಾಗಿದೆ. ಅನುಭವಿ ವೇಗಿ ಮುಸ್ತಫಿಜುರ್ ರೆಹಮಾನ್, ರಿಷದ್ ಹುಸೇನ್ ಹಾಗೂ ಮೆಹದಿ ಹಸನ್ ಅವರು ಇದುವರೆಗೆ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ತಂಡದ ಸಮಸ್ಯೆ ಇರುವುದು ಬ್ಯಾಟಿಂಗ್‌ನಲ್ಲಿ ಮಾತ್ರ. ನಾಯಕ ನಜ್ಮುಲ್ ಹುಸೇನ್ ಶಾಂತೊ, ತೌಹಿದ್ ಹೃದಯ್ ಹಾಗೂ ಲಿಟನ್ ದಾಸ್ ಅವರು ಉತ್ತಮ ಲಯದಲ್ಲಿದ್ದಾರೆ. ಉಳಿದವರ ಆಟದಲ್ಲಿ ಸ್ಥಿರತೆ ಇಲ್ಲ. 

ಇಲ್ಲಿಯ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದ ಪಿಚ್ ಶುಕ್ರವಾರ ನಡೆದ ಪಂದ್ಯದಲ್ಲಿ ವೇಗಿಗಳಿಗೆ ನೆರವು ನೀಡಿದೆ. ಈ ಪಂದ್ಯದಲ್ಲಿಯೂ ಅದೇ ತರಹದ ಆಟ ನಡೆಯುವ ಸಾಧ್ಯತೆ ಇದೆ. 

ಬಲಾಬಲ

ಪಂದ್ಯ; 13

ಭಾರತ ಜಯ;12

ಬಾಂಗ್ಲಾ ಜಯ;1

ಜಸ್‌ಪ್ರೀತ್ ಬೂಮ್ರಾ 
ಮುಸ್ತಫಿಜುರ್ ರೆಹಮಾನ್ 
ನ್ಯೂಯಾರ್ಕ್‌ನಂತಹ ಕೆಟ್ಟ ಪಿಚ್‌ನಲ್ಲಿಯೇ ಆಡಿದ್ದೇವೆ. ಅದಕ್ಕಿಂತ ಕೆಟ್ಟ ಅನುಭವ ಬೇರೆ ಕಡೆ ಆಗುವುದಿಲ್ಲ. ಆದ್ದರಿಂದ ಇಲ್ಲಿಯ ಪಿಚ್‌ ಅದಕ್ಕಿಂತಲೂ ಉತ್ತಮ ಎಂದೇ ಭಾವಿಸಿದ್ದೇವೆ.
–ವಿಕ್ರಮ್ ರಾಥೋಡ್ ಭಾರತ ಬ್ಯಾಟಿಂಗ್ ಕೋಚ್

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ಹಾರ್ದಿಕ್ ಪಾಂಡ್ಯ ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್ ರಿಷಭ್ ಪಂತ್ ಸಂಜು ಸ್ಯಾಮ್ಸನ್ ಶಿವಂ ದುಬೆ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಕುಲದೀಪ್ ಯಾದವ್ ಯಜುವೇಂದ್ರ ಚಾಹಲ್ ಅರ್ಷದೀಪ್ ಸಿಂಗ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್. 

ಬಾಂಗ್ಲಾದೇಶ: ನಜ್ಮುಲ್ ಹುಸೇನ್ ಶಾಂತೊ (ನಾಯಕ) ತಂಜೀದ್ ಹಸನ್ ಲಿಟನ್ ದಾಸ್ ಶಕೀಬ್ ಅಲ್ ಹಸನ್ ತೌಹಿದ್ ಹೃದಯ್ ಮೆಹಮುದುಲ್ಲಾ ಮೆಹದಿ ಹಸನ್ ರಿಷದ್ ಹುಸೇನ್ ತಸ್ಕಿನ್ ಅಹಮದ್ ತಂಜೀಮ್ ಹಸನ್ ಶಕೀಬ್ ಮುಸ್ತಫಿಜುರ್ ರೆಹಮಾನ್ ಜಾಕಡ್ ಅಲಿ ತನ್ವೀರ್ ಇಸ್ಲಾಂ ಶರೀಫುಲ್ ಇಸ್ಲಾಂ ಸೌಮ್ಯ ಸರ್ಕಾರ್. ಪಂದ್ಯ ಆರಂಭ: ರಾತ್ರಿ 8 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಡಿಡಿ ಸ್ಪೋರ್ಟ್ಸ್ ಹಾಟ್‌ಸ್ಟಾರ್ ಆ್ಯಪ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.