ಟ್ರಿನಿಡಾಡ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಒಂಬತ್ತು ವಿಕೆಟ್ ಅಂತರದ ಜಯ ಗಳಿಸಿರುವ ದಕ್ಷಿಣ ಆಫ್ರಿಕಾ ಫೈನಲ್‌ಗೆ ಪ್ರವೇಶಿಸಿದೆ. ಆ ಮೂಲಕ ಐಸಿಸಿ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ಪುರುಷರ ಕ್ರಿಕೆಟ್ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿತು.
'ಚೋಕರ್ಸ್' ಹಣೆಪಟ್ಟಿ ಕಳಚಿದ ದಕ್ಷಿಣ ಆಫ್ರಿಕಾ...
ಐಸಿಸಿ ಟೂರ್ನಿಗಳಲ್ಲಿ ನಿರ್ಣಾಯಕ ಸೆಮಿಫೈನಲ್ ಪಂದ್ಯಗಳಲ್ಲೇ ಎಡವುತ್ತಿದ್ದ ದಕ್ಷಿಣ ಆಫ್ರಿಕಾ ಕೊನೆಗೂ ಚೋಕರ್ಸ್ ಹಣೆಪಟ್ಟಿ ಕಳಚಿಕೊಂಡಿದೆ. ಕಳೆದ ಏಳು ಸಲವೂ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮುಗ್ಗರಿಸಿತ್ತು.
ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಎದುರಾದ ಸೆಮಿಫೈನಲ್ ಸೋಲು:
1992 ಏಕದಿನ ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಸೋಲು
1999 ಏಕದಿನ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಸೋಲು (ಟೈ ಪಂದ್ಯ)
2007 ಏಕದಿನ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಸೋಲು
2009 ಟ್ವೆಂಟಿ-20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಸೋಲು
2014 ಟ್ವೆಂಟಿ-20 ವಿಶ್ವಕಪ್: ಭಾರತ ವಿರುದ್ಧ ಸೋಲು
2015 ಏಕದಿನ ವಿಶ್ವಕಪ್: ನ್ಯೂಜಿಲೆಂಡ್ ವಿರುದ್ಧ ಸೋಲು
2023 ಏಕದಿನ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಸೋಲು
ಮರ್ಕರಂ ಮ್ಯಾಜಿಕ್...
ಏಡೆನ್ ಮರ್ಕರಂ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ, 2014ರ ಅಂಡರ್-19 ವಿಶ್ವಕಪ್ ಜಯಿಸಿತ್ತು. ಈಗ ಮಗದೊಮ್ಮೆ ಮರ್ಕರಂ ನಾಯಕತ್ವದಲ್ಲೇ ಫೈನಲ್‌ಗೆ ತಲುಪುವ ಮೂಲಕ ಇತಿಹಾಸ ರಚಿಸಿರುವ ದಕ್ಷಿಣ ಆಫ್ರಿಕಾ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಗುರಿಯಿರಿಸಿಕೊಂಡಿದೆ.
ಸತತ 8ನೇ ಗೆಲುವು...
ಪ್ರಸಕ್ತ ಸಾಗುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ದಕ್ಷಿಣ ಆಫ್ರಿಕಾ ಸತತ ಎಂಟು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನೊಂದು ಜಯ ಗಳಿಸುವಲ್ಲಿ ಯಶಸ್ವಿಯಾದರೆ ಟ್ರೋಫಿಯನ್ನು ತಮ್ಮದಾಗಿಸಲಿದೆ.
'ಡಿ' ಗುಂಪಿನಲ್ಲಿ ಎಲ್ಲ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದ್ದ ದಕ್ಷಿಣ ಆಫ್ರಿಕಾ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್ 8 ಹಂತಕ್ಕೆ ತಲುಪಿತ್ತು. ಸೂಪರ್ ಎಂಟರ ಹಂತದಲ್ಲೂ ಎಲ್ಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಪೈಕಿ ನೇಪಾಳ ವಿರುದ್ಧ ರೋಚಕ ಒಂದು ರನ್ ಅಂತರದ ಜಯ ಗಳಿಸಿತು.
'ಡಿ' ಗುಂಪು:
*ಶ್ರೀಲಂಕಾ ವಿರುದ್ಧ 6 ವಿಕೆಟ್ ಜಯ
*ನೆದರ್ಲೆಂಡ್ಸ್ ವಿರುದ್ಧ 4 ವಿಕೆಟ್ ಜಯ
*ಬಾಂಗ್ಲಾದೇಶ ವಿರುದ್ಧ 4 ರನ್ ಜಯ
*ನೇಪಾಳ ವಿರುದ್ಧ 1 ರನ್ ಜಯ
ಸೂಪರ್ 8ರ ಹಂತ:
*ಅಮೆರಿಕ ವಿರುದ್ಧ 18 ರನ್ ಜಯ
*ಇಂಗ್ಲೆಂಡ್ ವಿರುದ್ಧ 7 ರನ್ ಜಯ
*ವೆಸ್ಟ್ ಇಂಡೀಸ್ ವಿರುದ್ಧ 3 ವಿಕೆಟ್ ಜಯ (ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ)
ಸೆಮಿಫೈನಲ್:
*ಅಫ್ಗಾನಿಸ್ತಾನ ವಿರುದ್ಧ 9 ವಿಕೆಟ್ ಜಯ
ಅಫ್ಗಾನಿಸ್ತಾನ 56ಕ್ಕೆ ಆಲೌಟ್...
ದಕ್ಷಿಣ ಆಫ್ರಿಕಾದ ಸಾಂಘಿಕ ದಾಳಿಗೆ ತತ್ತರಿಸಿದ ಅಫ್ಗಾನಿಸ್ತಾನ ಕೇವಲ 56 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಐಸಿಸಿ ಟ್ವೆಂಟಿ-20 ವಿಶ್ವಕಪ್ ನಾಕೌಟ್ ಹಂತದಲ್ಲಿ ಅತಿ ಕನಿಷ್ಠ ಮೊತ್ತ ಗಳಿಸಿದ ತಂಡವೆಂಬ ಅಪಖ್ಯಾತಿಗೆ ಒಳಗಾಗಿದೆ. ಮಾರ್ಕೊ ಜಾನ್ಸೆನ್ ಹಾಗೂ ತಬ್ರೇಜ್ ಸಂಶಿ ತಲಾ ಮೂರು ಮತ್ತು ಕಗಿಸೊ ರಬಾಡ ಹಾಗೂ ಹೆನ್ರಿಚ್ ನಾಕಿಯಾ ತಲಾ ಎರಡು ವಿಕೆಟ್ ಗಳಿಸಿ ಮಿಂಚಿದರು.
ಈ ಹಿಂದೆ 2009ರ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ವೆಸ್ಟ್‌ಇಂಡೀಸ್ 101ಕ್ಕೆ ಆಲೌಟ್ ಆಗಿತ್ತು. ಇನ್ನು 2012ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ 101ಕ್ಕೆ ಆಲೌಟ್ ಆಗಿತ್ತು.
ಅಫ್ಗಾನಿಸ್ತಾನ ಐತಿಹಾಸಿಕ ಸಾಧನೆ...
ಸೆಮಿಫೈನಲ್‌ನಲ್ಲಿ ಅಫ್ಗಾನಿಸ್ತಾನ ಮುಗ್ಗರಿಸಿರಬಹುದು. ಆದರೂ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಸೆಮಿಫೈನಲ್‌ಗೆ ತಲುಪುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ.
ಅಫ್ಗಾನಿಸ್ತಾನ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ: ಮ್ಯಾಚ್ ಹೈಲೈಟ್ಸ್ ಇಲ್ಲಿ ವೀಕ್ಷಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.