ಗ್ರಾಸ್ ಐಲ್, ಸೇಂಟ್ ಲೂಸಿಯಾ: ಕ್ವಿಂಟನ್ ಡಿಕಾಕ್ (65; 38ಎ, 4X4, 6X4) ಬಿರುಸಿನ ಅರ್ಧ ಶತಕ ಹಾಗೂ ಕೇಶವ್ ಮಹಾರಾಜ್ (25ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಸೂಪರ್ ಎಂಟರ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಶುಕ್ರವಾರ ಇಂಗ್ಲೆಂಡ್ ಮೇಲೆ 7 ರನ್‌ಗಳ ಜಯ ಸಾಧಿಸಿತು.
ಮೊದಲ ಆಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 163 ರನ್ ಗಳಿಸಿತು. 164 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು 14 ರನ್‌ಗಳ ಅಗತ್ಯವಿತ್ತು. ಆದರೆ ಆನ್ರಿಚ್ ನಾಕಿಯಾ ಅಂತಿಮ ಓವರ್‌ನಲ್ಲಿ ಹ್ಯಾರಿ ಬ್ರೂಕ್ (53) ಅವರ ಪ್ರಮುಖ ವಿಕೆಟ್ ಪಡೆದರಲ್ಲದೇ ಕೇವಲ ಅರು ರನ್ ಬಿಟ್ಟುಕೊಟ್ಟು ಗೆಲುವಿಗೆ ನೆರವಾದರು.ಇಂಗ್ಲೆಂಡ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಜಾನಿ ಬೇಸ್ಟೊ ಹಾಗೂ ಜೋಸ್ ಬಟ್ಲರ್ ಅವರ ವಿಕೆಟ್ ಕಬಳಿಸುವ ಮೂಲಕ ಕೇಶವ್ ಮಹಾರಾಜ್ ಆರಂಭಿಕ ಆಘಾತ ನೀಡಿದರು. ನಂತರ ಬಂದ ಹ್ಯಾರಿ ಬ್ರೂಕ್ (53) ಅರ್ಧ ಶತಕ ಗಳಿಸಿ ತಂಡಕ್ಕೆ ಆಸರೆಯಾದರು. ಲಿ ಯಾಮ್ ಲಿವಿಂಗ್‌ಸ್ಟೋನ್ ಮತ್ತು ಹ್ಯಾರಿ ಬ್ರೂಕ್ ಜೋಡಿ ಐದನೇ ವಿಕೆಟ್‌ಗೆ 50 ರನ್ ಸೇರಿಸಿತು. ಈ ಇಬ್ಬರ ನಿರ್ಗಮನ ಬಳಿಕ ಉಳಿದವರು ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ.
ಇದಕ್ಕೂ ಮುನ್ನ ಕ್ವಿಂಟನ್ ಮತ್ತು ರೀಜಾ ಹೆನ್ರಿಕ್ಸ್ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 86 ರನ್ ಸೇರಿಸಿದರು. ಹತ್ತನೇ ಓವರ್‌ನಲ್ಲಿ ಮೋಯಿನ್ ಅಲಿ ಅವರು ರೀಜಾ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ಎರಡು ಓವರ್‌ಗಳ ನಂತರ ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ವಿಂಟನ್ ಔಟಾದರು.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 163 (ರೀಜಾ ಹೆನ್ರಿಕ್ಸ್ 19, ಕ್ವಿಂಟನ್ ಡಿಕಾಕ್ 65, ಡೇವಿಡ್ ಮಿಲ್ಲರ್ 43, ಜೋಫ್ರಾ ಆರ್ಚರ್ 40ಕ್ಕೆ3)
ಇಂಗ್ಲೆಂಡ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 156 (ಹ್ಯಾರಿ ಬ್ರೂಕ್ 53, ಲಿಯಾಮ್ ಲಿವಿಂಗ್‌ಸ್ಟೋನ್ 33, ಕೇಶವ್ ಮಹಾರಾಜ್ 25ಕ್ಕೆ2, ಕಗಿಸೊ ರಬಾಡ 32ಕ್ಕೆ2)
ಪಂದ್ಯ ಶ್ರೇಷ್ಠ: ಕ್ವಿಂಟನ್ ಡಿಕಾಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.