ದುಬೈ: ಐಸಿಸಿ ಟೂರ್ನಿಗಳಲ್ಲಿ ಭಾರತದ ಪಾಲಿಗೆ ನ್ಯೂಜಿಲೆಂಡ್ ಅಕ್ಷರಶಃ ವಿಲನ್ ಆಗಿ ಪರಿಣಮಿಸಿದೆ. ಸತತ ಮೂರನೇ ಬಾರಿಗೆ ವಿರಾಟ್ ಕೊಹ್ಲಿ ಬಳಗದ ವಿಶ್ವಕಪ್ ಟ್ರೋಫಿ ಕನಸನ್ನು ಕೇನ್ ವಿಲಿಯಮ್ಸನ್ ಪಡೆಯು ನುಚ್ಚುನೂರುಗೊಳಿಸಿದೆ.
2019ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಭಾರತದ ಕನಸು ಭಗ್ನಗೊಂಡಿತ್ತು.
ಅದಾದ ಎರಡು ವರ್ಷಗಳ ಬಳಿಕ 2021 ಜೂನ್ ತಿಂಗಳಲ್ಲಿ ಕಿವೀಸ್ ವಿರುದ್ಧವೇಶರಣಾದ ಭಾರತ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್-ಆಪ್ ಪ್ರಶಸ್ತಿಗೆ ತೃಪ್ತಿಕೊಂಡಿತ್ತು.
ಇದೀಗ ಮೂರನೇ ಬಾರಿಗೆ ನ್ಯೂಜಿಲೆಂಡ್‌ನಿಂದಾಗಿ ಭಾರತವು ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕನಿಷ್ಠ ಸೆಮಿಫೈನಲ್ ಹಂತಕ್ಕೆ ಪ್ರೇವಶಿಸಲಾಗದೇಮುಖಭಂಗ ಅನುಭವಿಸಿದೆ.
ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಾಗಲೇ ಭಾರತದ ಭವಿಷ್ಯ ಬಹುತೇಕ ನಿರ್ಧಾರವಾಗಿತ್ತು. ಆದರೂ ಕನಿಷ್ಠ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಅಫ್ಗಾನಿಸ್ತಾನ ಗೆದ್ದರೆ ಟೀಮ್ ಇಂಡಿಯಾದ ಸೆಮಿಫೈನಲ್ ಕನಸು ಮಗದೊಮ್ಮೆ ಚಿಗುರೊಡೆಯುತ್ತಿತ್ತು.
ಆದರೆ ಭಾನುವಾರ ಅಫ್ಗನ್ ವಿರುದ್ಧ ನಡೆದ ಪಂದ್ಯದಲ್ಲಿ ವಿಲಿಯಮ್ಸನ್ ಬಳಗ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸುವುದರೊಂದಿಗೆ ಭಾರತ ಟೂರ್ನಿಯಿಂದಲೇ ಹೊರಬಿದ್ದಿದೆ.
ಇತಿಹಾಸದ ಪುಟ ತೆರೆದು ನೋಡಿದಾಗ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಕೆಟ್ಟ ದಾಖಲೆಯನ್ನು ಹೊಂದಿದೆ. ಈಗ ಕೇನ್ ವಿಲಿಯಮ್ಸನ್ ಆಗಮನದೊಂದಿಗೆ ಕಿವೀಸ್ ಸವಾಲನ್ನು ಮೆಟ್ಟಿ ನಿಲ್ಲುವುದು ವಿರಾಟ್ ಕೊಹ್ಲಿ ಪಡೆಯ ಪಾಲಿಗೆ ಕಠಿಣ ಸವಾಲಾಗಿ ಪರಿಣಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.