ADVERTISEMENT

T20 world cup 2024: IND vs SA- ದಶಕದ ಕೊರಗು ನೀಗಿಸುವತ್ತ ಭಾರತ ಚಿತ್ತ

ಟಿ20 ವಿಶ್ವಕಪ್ ಫೈನಲ್ ಇಂದು: ಚೊಚ್ಚಲ ಪ್ರಶಸ್ತಿ ಜಯದ ಕನಸಲ್ಲಿ ದಕ್ಷಿಣ ಆಫ್ರಿಕಾ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 23:42 IST
Last Updated 28 ಜೂನ್ 2024, 23:42 IST
ಅಕ್ಷರ್ ಪಟೇಲ್, ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್  –ಪಿಟಿಐ ಚಿತ್ರ
ಅಕ್ಷರ್ ಪಟೇಲ್, ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್  –ಪಿಟಿಐ ಚಿತ್ರ   

ಬ್ರಿಜ್‌ಟೌನ್: ಇದೋ ನೋಡಿ. ಭಾರತ ತಂಡವು ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಿಶ್ವಕಪ್ ಟೂರ್ನಿಯ ಫೈನಲ್‌ ಹಂತ ಪ್ರವೇಶಿಸಿದೆ. 

ಕಳೆದ ಒಂದು ದಶಕದಿಂದ ತಂಡವು ಯಾವುದೇ ಐಸಿಸಿ ಟ್ರೋಫಿಯನ್ನು ಜಯಿಸಿಲ್ಲ ಎನ್ನುವುದು ಬೇರೆ ವಿಷಯ. ಆದರೆ ತಂಡವು ಜಯಿಸುತ್ತದೆ ಎಂಬ ವಿಶ್ವಾಸ ಪ್ರತಿಯೊಬ್ಬರಿಗೂ ಇದೆ. ಬಹುಶಃ ದಕ್ಷಿಣ ಆಫ್ರಿಕಾ ತಂಡಕ್ಕೂ ಇದೇ ರೀತಿ ಅನಿಸುತ್ತಿರಬೇಕು. ಏಕೆಂದರೆ ರೋಹಿತ್ ಶರ್ಮಾ ಅವರ ಬಳಗವು ಇದುವರೆಗೆ ಆಡಿರುವ ಕ್ರಿಕೆಟ್ ಉತ್ಕೃಷ್ಟ ಮಟ್ಟದ್ದಾಗಿದೆ. ಈ ರೀತಿಯಾಗಿ ಅಪಾರ ಸಂಘಟಿತ ಶಕ್ತಿಯೊಂದಿಗೆ ಆಡಿದ ತಂಡ ಇಂದಿನ ಕಾಲಘಟ್ಟದಲ್ಲಿ ಮತ್ತೊಂದಿರಲಿಕ್ಕಿಲ್ಲ. 

ಇದೊಂದು ಅಪರೂಪದ ತಂಡ ಸಂಯೋಜನೆಯಾಗಿದೆ. 70 ಮತ್ತು 80ರ ದಶಕದಲ್ಲಿದ್ದ ವೆಸ್ಟ್ ಇಂಡೀಸ್, 90 ಮತ್ತು 2000ರ ದಶಕದ ಆಸ್ಟ್ರೇಲಿಯಾದ ತಂಡಗಳಿಗೆ ಇಂದಿನ ರೋಹಿತ್ ಬಳಗಕ್ಕೂ ಅಪಾರ ಸಾಮ್ಯತೆ ಇದೆ. ಆದರೆ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಗೆ ಟ್ರೋಫಿ ಜಯದ ಮುದ್ರೆಯನ್ನು ಒತ್ತುವ ಕಾರ್ಯ ಬಾಕಿಯಿದೆ. ಏಕೆಂದರೆ; ಪ್ರಶಸ್ತಿಗಳು ಶ್ರೇಷ್ಠತೆಯನ್ನು ಸಾರುತ್ತವೆ. ಹತ್ತು ವರ್ಷಗಳಿಂದ ಈ ಕೊರಗು ಭಾರತ ತಂಡವನ್ನು ಕಾಡುತ್ತಿದೆ. ಇದೀಗ ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್‌ನಲ್ಲಿ ಮಣಿಸಿ ಅದನ್ನು ನೀಗಿಸಿಕೊಳ್ಳುವ ಕಾಲ ಬಂದಿದೆ.   

ADVERTISEMENT

ಭಾರತದ ಕ್ರಿಕೆಟ್ ರಂಗದ ಕೆಲವು ಶ್ರೇಷ್ಠ ಸಾಧಕರು ಕಣದಲ್ಲಿ ಕಾಣಿಸಿಕೊಳ್ಳಲಿರುವ ಕೊನೆಯ ಟಿ20 ವಿಶ್ವಕಪ್ ಟೂರ್ನಿ ಇದಾಗಿದೆ. ಆದ್ದರಿಂದ ತಮ್ಮ ವಿದಾಯವನ್ನು ಅವಿಸ್ಮರಣೀಯವಾಗಿಸಿಕೊಳ್ಳುವ ಕನಸು ಅವರ ಕಂಗಳಲ್ಲಿದೆ. ಜೊತೆಗೆ ಈ ಹಿಂದೆ ಅನುಭವಿಸಿದ ಹತಾಶೆಗಳ ನೋವನ್ನು ಶಮನಗೊಳಿಸಿಕೊಳ್ಳಲೂ ಈ ಜಯ ಅಗತ್ಯವಾಗಿದೆ. 

ಏಳು ತಿಂಗಳುಗಳ ಹಿಂದೆ ಅಹಮದಾಬಾದಿನಲ್ಲಿ ಆಸ್ಟ್ರೇಲಿಯಾ ಎದುರು (ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್) ಅನುಭವಿಸಿದ್ದ ಸೋಲಿನ ನೋವು ಇನ್ನೂ ಕಾಡುತ್ತಿದೆ. ಆ ಟೂರ್ನಿಯುದ್ದಕ್ಕೂ ಶ್ರೇಷ್ಠ ಆಟದೊಂದಿಗೆ ಅಜೇಯವಾಗಿ ಉಳಿದಿದ್ದ ತಂಡವು ಒಂದೇ ರಾತ್ರಿಯಲ್ಲಿ ನಿರಾಶೆಯ ಮಡುವಿಗೆ ಉರುಳಲು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಕಾರಣರಾಗಿದ್ದರು. 

ಅಂದಿನ ಲೋಪಗಳನ್ನು ಸುಧಾರಿಸಿಕೊಂಡು ಈಗ ಮುನ್ನುಗ್ಗಲು ಭಾರತ ತಂಡ ಸನ್ನದ್ಧವಾಗಿದೆ. ವಿರಾಟ್ ಕೊಹ್ಲಿ ಮತ್ತು ಶಿವಂ ದುಬೆ ಅವರಿಬ್ಬರನ್ನು ಬಿಟ್ಟರೆ ಉಳಿದೆಲ್ಲರೂ ತಂಡಕ್ಕೆ ಅಗತ್ಯವಿದ್ದ ಸಂದರ್ಭಗಳಲ್ಲಿ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಈ ಹಿಂದೆ ಹೊರಹೊಮ್ಮಿದ್ದ ಚಾಂಪಿಯನ್ ಆಟಗಾರರಂತೆ ಈ ತಂಡದವರೂ ಹೊಸ ಭಾಷ್ಯ ಬರೆಯುವ ವಿಶ್ವಾಸ ಮೂಡಿಸಿದ್ದಾರೆ. 

ಭಾರತ ತಂಡವು 2007ರಲ್ಲಿ ನಡೆದಿದ್ದ ಮೊಟ್ಟಮೊದಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. 2014ರ ಏಪ್ರಿಲ್ 6ರಂದು ನಡೆದಿದ್ದ ಟೂರ್ನಿ ಫೈನಲ್‌ನಲ್ಲಿ ಶ್ರೀಲಂಕಾ ತಂಡವು ಭಾರತ ತಂಡದ ಕನಸನ್ನು ಭಗ್ನಗೊಳಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ತಂಡವು ಫೈನಲ್‌ ಕೂಡ ತಲುಪಿರಲಿಲ್ಲ. 

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್‌ ಶರ್ಮಾ ಅವರು ಜೊತೆಗೂಡಿ ತಂಡವು ಪ್ರಮುಖ ಘಟ್ಟಗಳಲ್ಲಿ ಸೋಲುತ್ತಿರುವ ಕಾರಣಗಳನ್ನು ಪತ್ತೆ ಹಚ್ಚಿದರು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಭರವಸೆ ಬಿತ್ತಿದರು. ಹೊಸ ಅಲೆಗಳು ಏಳಲು ಕಾರಣರಾದರು. 

ಪ್ರತಿಭಾ ಸಂಪನ್ಮೂಲ ಅಪಾರವಾಗಿದ್ದಾಗ ಭಾರತ ತಂಡವು ಶ್ರೇಷ್ಠವಾಗಲು ಸಾಧ್ಯವಾಗಿದೆ. ಅದೇ ಸಾಮರ್ಥ್ಯದಿಂದ ಈ ಹಂತದವರೆಗೂ ಬಂದು ನಿಂತಿದೆ. ಯಾವುದೇ ಇನ್ನಿತರ ಅನುಕೂಲತೆಗಳಿಂದಲ್ಲ. ತಂಡದ ಈ ಹೊಂದಾಣಿಕೆ ಸಾಮರ್ಥ್ಯವು ಶನಿವಾರ ರಾತ್ರಿ ಸಾಬೀತಾಗಲಿದೆ.

ಬಲಾಬಲ (ಟಿ20)

ಪಂದ್ಯ;26

ಭಾರತ ಜಯ;14

ದ.ಆಫ್ರಿಕಾ ಜಯ;11

ಫಲಿತಾಂಶವಿಲ್ಲ;1

ದಕ್ಷಿಣ ಆಫ್ರಿಕಾದ ಎನ್ರಿಚ್ ನಾಕಿಯಾ ಮತ್ತು ಕಗಿಸೊ ರಬಾಡ  –ಎಪಿ/ಪಿಟಿಐ ಚಿತ್ರ
ಜಸ್‌ಪ್ರೀತ್ ಬೂಮ್ರಾ 

ಸೆಮಿಫೈನಲ್‌ನಲ್ಲಿ ಮಿಂಚಿದ್ದ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಅಮೋಘ ಲಯದಲ್ಲಿದರುವ ವೇಗಿ ಜಸ್‌ಪ್ರೀತ್ ಬೂಮ್ರಾ ಪ್ರಸಕ್ತ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದ ಭಾರತ–ದಕ್ಷಿಣ ಆಫ್ರಿಕಾ

ತಂಡಗಳು (ಸಂಭವನೀಯ) ಭಾರತ: ರೋಹಿತ್ ಶರ್ಮಾ (ನಾಯಕ) ವಿರಾಟ್ ಕೊಹ್ಲಿ ರಿಷಬ್ ಪಂತ್ (ವಿಕೆಟ್‌ ಕೀಪರ್) ಸೂರ್ಯಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ ಶಿವಂ ದುಬೆ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಜಸ್‌ಪ್ರೀತ್ ಬೂಮ್ರಾ ಕುಲದೀಪ್ ಯಾದವ್  ಅರ್ಷದೀಪ್ ಸಿಂಗ್. ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ) ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್) ರೀಜಾ ಹೆನ್ರಿಕ್ಸ್ ಟ್ರಿಸ್ಟನ್ ಸ್ಟಬ್ಸ್ ಹೆನ್ರಿಚ್ ಕ್ಲಾಸೆನ್ ಡೇವಿಡ್ ಮಿಲ್ಲರ್ ಮಾರ್ಕೊ ಯಾನ್ಸೆನ್ ಕೇಶವ್ ಮಹಾರಾಜ್ ಕಗಿಸೊ ರಬಾಡ ಎನ್ರಿಚ್ ನಾಕಿಯಾ ತಬ್ರೇಜ್ ಶಮ್ಸಿ. ಪಂದ್ಯ ಆರಂಭ: ರಾತ್ರಿ 8 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಡಿಡಿ ಸ್ಪೋರ್ಟ್ಸ್ ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.