ADVERTISEMENT

ಈ ಟಿ20 ವಿಶ್ವಕಪ್‌ ನನ್ನ ಕೊನೇ ಟೂರ್ನಿ: ನ್ಯೂಜಿಲೆಂಡ್ ಸ್ಟಾರ್ ವೇಗಿ ಬೌಲ್ಟ್

ಪಿಟಿಐ
Published 15 ಜೂನ್ 2024, 10:53 IST
Last Updated 15 ಜೂನ್ 2024, 10:53 IST
<div class="paragraphs"><p>ಟ್ರೆಂಟ್‌ ಬೌಲ್ಟ್‌</p></div>

ಟ್ರೆಂಟ್‌ ಬೌಲ್ಟ್‌

   

ಪಿಟಿಐ ಚಿತ್ರ

ತರೌಬಾ (ಟ್ರೆನಿಡಾಡ್): ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುತ್ತಿರುವ 'ಟಿ20 ಕ್ರಿಕೆಟ್‌ ವಿಶ್ವಕಪ್' ತಾವಾಡುವ ಕೊನೇ ಟೂರ್ನಿ ಎಂದು ನ್ಯೂಜಿಲೆಂಡ್‌ ತಂಡದ ಸ್ಟಾರ್‌ ವೇಗಿ ಟ್ರೆಂಟ್‌ ಬೌಲ್ಟ್‌ ಹೇಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 2011ರಲ್ಲಿ ಪದಾರ್ಪಣೆ ಮಾಡಿದ ಬೌಲ್ಟ್‌, ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ನ್ಯೂಜಿಲೆಂಡ್‌ ತಂಡದ ಪ್ರಮುಖ ಆಟಗಾರ ಎನಿಸಿದ್ದರು. 2014ರಿಂದ ಈವರೆಗೆ ಟಿ20 ಮಾದರಿಯ 4 ವಿಶ್ವಕಪ್‌ ಆವೃತ್ತಿಯಲ್ಲಿ ಆಡಿದ ಖ್ಯಾತಿಯೂ ಆವರದ್ದಾಗಿದೆ.

ಉಗಾಂಡ ವಿರುದ್ಧ ಇಂದು (ಶನಿವಾರ) ನಡೆದ ಪಂದ್ಯದಲ್ಲಿ 9 ವಿಕೆಟ್‌ ಅಂತರದ ಗೆಲುವು ಸಾಧಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೌಲ್ಟ್‌, 'ಈ ಟಿ20 ವಿಶ್ವಕಪ್‌ ನನ್ನ ಕೊನೇ ಟೂರ್ನಿಯಾಗಲಿದೆ' ಎಂದಿದ್ದಾರೆ. 

2022ರಲ್ಲಿ ಕೇಂದ್ರೀಯ ಗುತ್ತಿಗೆಯಿಂದ ಹೊರಗುಳಿದಿದ್ದ ಬೌಲ್ಟ್‌, ವಿಶ್ವದಾದ್ಯಂತ ನಡೆಯುವ ಟಿ20 ಲೀಗ್‌ಗಳಲ್ಲಿ ಆಡಲು ಆಸಕ್ತಿ ತೋರಿದ್ದರು. ಹೀಗಾಗಿ, ಇನ್ನುಮುಂದೆ ನ್ಯೂಜಿಲೆಂಡ್‌ ಪರ ಬೇರೆ ಮಾದರಿಗಳಲ್ಲಾದರೂ ಆಡಲಿದ್ದಾರೆಯೇ ಎಂಬುದು ಅನಿಶ್ಚಿತವಾಗಿದೆ.

ಉಗಾಂಡ ವಿರುದ್ಧ ಗೆಲುವು ಸಾಧಿಸಿದ ಹೊರತಾಗಿಯೂ ನ್ಯೂಜಿಲೆಂಡ್‌ ಪಡೆ ಈ ಬಾರಿಯ ವಿಶ್ವಕಪ್‌ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ. 'ಸಿ' ಗುಂಪಿನಲ್ಲಿರುವ ಕಿವೀಸ್‌, ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಷ್ಟೇ ಗೆದ್ದಿದೆ. ಮೊದಲೆರಡು ಪಂದ್ಯಗಳಲ್ಲಿ ಅಫ್ಗಾನಿಸ್ತಾನ ಮತ್ತು ವೆಸ್ಟ್ ಇಂಡೀಸ್‌ ವಿರುದ್ಧ ಸೋತಿದೆ. ಗುಂಪು ಹಂತದ ತನ್ನ ಕೊನೇ ಪಂದ್ಯದಲ್ಲಿ ಜೂನ್‌ 17ರಂದು ಪಪುವಾ ನ್ಯೂಗಿನಿ ಎದುರು ಕಣಕ್ಕಿಳಿಯಲಿದೆ. ಅದು ಬೌಲ್ಟ್‌ ಪಾಲಿಗೆ ಕೊನೇ ಪಂದ್ಯವಾಗಲಿದೆ.

ಟೂರ್ನಿಯಲ್ಲಿ ಎದುರಾದ ಸೋಲುಗಳ ಬಗ್ಗೆ ಮಾತನಾಡಿರುವ ಬೌಲ್ಟ್‌, 'ಖಂಡಿತವಾಗಿಯೂ ಇದು ನಾವು ಎದುರು ನೋಡುತ್ತಿದ್ದ ಆರಂಭವಂತೂ ಅಲ್ಲ. ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ನಾವು ಮುಂದಿನ ಹಂತಕ್ಕೆ ಹೋಗಲು ಸಾಧ್ಯವಿಲ್ಲ. ಆದರೂ, ಯಾವುದೇ ಸಮಯದಲ್ಲಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ' ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್ ಪರ 78 ಟೆಸ್ಟ್, 114 ಏಕದಿನ ಹಾಗೂ 60 ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಬೌಲ್ಟ್‌, ಕ್ರಮವಾಗಿ 317, 211 ಹಾಗೂ 81 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ. ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ 103 ಪಂದ್ಯಗಳಲ್ಲಿ ಕಣಕ್ಕಿಳಿದಿರುವ 34 ವರ್ಷದ ಈ ಆಟಗಾರ 121 ವಿಕೆಟ್‌ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.