ADVERTISEMENT

T20 WC | ಸತತ 2 ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್; ವಿಶ್ವದಾಖಲೆ ಬರೆದ ಕಮಿನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2024, 9:22 IST
Last Updated 23 ಜೂನ್ 2024, 9:22 IST
<div class="paragraphs"><p>ಪ್ಯಾಟ್‌ ಕಮಿನ್ಸ್‌</p></div>

ಪ್ಯಾಟ್‌ ಕಮಿನ್ಸ್‌

   

ಪಿಟಿಐ ಚಿತ್ರ

ಕಿಂಗ್ಸ್‌ಟನ್‌: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ಅವರು ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌ 8 ಹಂತದ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ ಪಡೆದರು. ಆ ಮೂಲಕ ಅವರು ಚುಟುಕು ಕ್ರಿಕೆಟ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಹಾಗೂ ವಿಶ್ವಕಪ್‌ನಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ ಏಕೈಕ ಬೌಲರ್‌ ಎನಿಸಿಕೊಂಡರು.

ADVERTISEMENT

ಇನಿಂಗ್ಸ್‌ನ 18ನೇ ಓವರ್‌ ಬೌಲಿಂಗ್‌ ಮಾಡಿದ 31 ವರ್ಷದ ವೇಗಿ ಕಮಿನ್ಸ್‌, ಕೊನೇ ಎಸೆತದಲ್ಲಿ ಅಫ್ಗಾನಿಸ್ತಾನ ನಾಯಕ ರಶೀದ್‌ ಖಾನ್‌ ವಿಕೆಟ್‌ ಪಡೆದರು. ಬಳಿಕ 20ನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ಕರೀಂ ಜನತ್ ಹಾಗೂ ಗುಲ್ಬದಿನ್‌ ನೈಬ್‌ ಅವರನ್ನು ಔಟ್‌ ಮಾಡಿದರು. ಇದರೊಂದಿಗೆ ಐತಿಹಾಸಿಕ ದಾಖಲೆ ಬರೆದರು.

ಕಮಿನ್ಸ್‌ ಕಳೆದ ಪಂದ್ಯದಲ್ಲೂ ಸತತ ಮೂರು ಎಸೆತಗಳಲ್ಲಿ ವಿಕೆಟ್‌ ಕಿತ್ತಿದ್ದರು. ಬಾಂಗ್ಲಾದೇಶ ವಿರುದ್ಧ ನಡೆದ 'ಸೂಪರ್‌ 8' ಹಂತದ ಆ ಪಂದ್ಯದಲ್ಲೂ 18 ಮತ್ತು 20ನೇ ಓವರ್‌ನಲ್ಲೇ ಈ ಸಾಧನೆ ಮಾಡಿದ್ದು ವಿಶೇಷ. 18ನೇ ಓವರ್‌ನ 5 ಮತ್ತು 6ನೇ ಎಸೆತಗಳಲ್ಲಿ ಕ್ರಮವಾಗಿ ಮೊಹಮದ್ದುಲ್ಲಾ, ಮೆಹದಿ ಹಸನ್‌ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದ ಅವರು 20ನೇ ಓವರ್‌ನ ಮೊದಲ ಎಸೆತದಲ್ಲಿ ತೌಹಿದ್ ಹೃದೊಯ್‌ ವಿಕೆಟ್‌ ಉರುಳಿಸಿದ್ದರು.

ವಿಶೇಷವೆಂದರೆ ಬಾಂಗ್ಲಾ ಎದುರಿನ ಪಂದ್ಯಕ್ಕೂ ಮುನ್ನ ಕಮಿನ್ಸ್‌ ಆಸ್ಟ್ರೇಲಿಯಾ ಪರ ಒಮ್ಮೆಯೂ ಹ್ಯಾಟ್ರಿಕ್‌ ವಿಕೆಟ್‌ ಪಡೆದಿರಲಿಲ್ಲ.

ಅಫ್ಗಾನಿಸ್ತಾನ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಕಮಿನ್ಸ್‌, 'ಆಸ್ಟ್ರೇಲಿಯಾ ಪರ ನೂರಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ನಂತರ ಸತತವಾಗಿ ಎರಡು ಸಲ ಹ್ಯಾಟ್ರಿಕ್‌ ವಿಕೆಟ್‌ ಪಡೆದಿರುವುದು ಅತ್ಯಂತ ರೋಮಾಂಚನವುಂಟುಮಾಡಿದೆ' ಎಂದಿದ್ದಾರೆ.

ಈ ಬಾರಿಯ ವಿಶ್ವಕಪ್‌ ಟೂರ್ನಿಯು ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುತ್ತಿದೆ.

ಸಾಧನೆ ಹೊರತಾಗಿಯೂ ಸೋಲು
ಕಮಿನ್ಸ್ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಅಫ್ಗಾನಿಸ್ತಾನ ಎದುರು 21 ರನ್‌ ಅಂತರದ ಸೋಲು ಅನುಭವಿಸಿತು.

ಇಲ್ಲಿನ ಅರ್ನೋಸ್‌ ವಾಲೆ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 148 ರನ್ ಗಳಿಸಿತು. ಆರಂಭಿಕ ಬ್ಯಾಟರ್‌ಗಳಾದ ರಹಮಾನುಲ್ಲಾ ಗುರ್ಬಾಜ್‌ (60) ಮತ್ತು ಇಬ್ರಾಹಿಂ ಜರ್ದಾನ್‌ (51) ಅರ್ಧಶತಕ ಗಳಿಸಿ ಮಿಂಚಿದರು.

ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲವಾದರು. ಈ ತಂಡದ ಎಂಟು ಬ್ಯಾಟರ್‌ಗಳಿಗೆ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಕಾಂಗರೂ ನಾಡಿನ ತಂಡ 127 ರನ್‌ಗಳಿಗೆ ಆಲೌಟ್‌ ಆಯಿತು.

4 ಓವರ್‌ ಬೌಲಿಂಗ್‌ ಮಾಡಿದ ಗುಲ್ಬದಿನ್‌ ನೈಬ್‌ 20 ರನ್‌ ನೀಡಿ 4 ವಿಕೆಟ್‌ ಪಡೆದರು. ನವೀನ್‌ ಉಲ್‌ ಹಕ್‌ 3 ವಿಕೆಟ್‌ ಕಿತ್ತರು. ಇನ್ನು ಮೂರು ವಿಕೆಟ್‌ಗಳನ್ನು ರಶೀದ್ ಖಾನ್‌, ಮೊಹಮ್ಮದ್‌ ನಬಿ ಮತ್ತು ಅಝ್ಮತ್‌ಉಲ್ಲಾ ಒಮರ್ಝೈ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.