ಬೆಂಗಳೂರು: ಕ್ರಿಕೆಟ್ ಲೋಕದ ‘ಗೋಡೆ‘ ರಾಹುಲ್ ದ್ರಾವಿಡ್ ಅವರಿಗೆ ಈ ಟಿ20 ವಿಶ್ವಕಪ್ ವಿಜಯವು ಅತ್ಯಂತ ವಿಶೇಷವಾದದ್ದು.
2007ರಲ್ಲಿ ಇದೇ ಕೆರೀಬಿಯನ್ ನಾಡಿನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಹೀನಾಯ ಸೋಲು ಅನುಭವಿಸಿತ್ತು. ಆಗ ತಂಡಕ್ಕೆ ರಾಹುಲ್ ದ್ರಾವಿಡ್ ನಾಯಕರಾಗಿದ್ದರು. ಆ ಸೋಲಿಗಾಗಿ ದೇಶದ ಜನತೆಯ ಆಕ್ರೋಶವನ್ನು ಆಟಗಾರರು ಎದುರಿಸಿದ್ದರು. ಮಹೇಂದ್ರಸಿಂಗ್ ಧೋನಿ ಸೇರಿದಂತೆ ಕೆಲವು ಆಟಗಾರರ ಮನೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು.
ಇದೀಗ ಅದೇ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಕೆರೀಬಿಯನ್ ನೆಲದಲ್ಲಿ ಟಿ20 ಪ್ರಶಸ್ತಿ ಜಯಿಸಿದೆ. ಇದರೊಂದಿಗೆ ರಾಹುಲ್ ತಮ್ಮ ಸ್ಥಾನದಿಂದ ನಿರ್ಗಮಿಸುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಕರ್ನಾಟಕದ ದ್ರಾವಿಡ್ ಅವರಿಗೆ ಈ ಸ್ಥಾನವನ್ನು ಬಿಸಿಸಿಐ ನೀಡಿದಾಗ ಹಲವರು ಹುಬ್ಬೇರಿಸಿದ್ದರು.
ಏಕೆಂದರೆ; ಶಿಸ್ತಿನ ಕೋಚ್ ಎಂದೇ ಹೆಸರಾಗಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಅವರು ರಾಜೀನಾಮೆ ನೀಡಿದ್ದ ಘಟನೆಯನ್ನು ಕ್ರಿಕೆಟ್‌ಪ್ರೇಮಿಗಳು ಮರೆತಿರಲಿಲ್ಲ. ದ್ರಾವಿಡ್ ಕೂಡ ಕುಂಬ್ಳೆ ಸಮಕಾಲೀನರು ಮತ್ತು ಅಷ್ಟೇ ಶಿಸ್ತಿನ ವ್ಯಕ್ತಿಯಾಗಿದ್ದರು. ಭಾರತ ತಂಡದಲ್ಲಿ ಮುಖ್ಯ ಕೋಚ್ ಆದವರಿಗೆ ಎದುರಾಗುವ ಸವಾಲುಗಳು ವಿಭಿನ್ನ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಟಿ ಕೋಟಿ ಮೌಲ್ಯ ಪಡೆದ ಹಾಗೂ ತಾರಾವರ್ಚಸ್ಸು ಗಳಿಸಿ ರಾಷ್ಟ್ರೀಯ ಬಳಗಕ್ಕೆ ಬರುವ ಆಟಗಾರರಿಗೆ ‘ತರಬೇತಿ’ ನೀಡುವುದು ಸುಲಭವಲ್ಲ. ಆದರೆ ವಿಶ್ವ ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾಗಿರುವ ದ್ರಾವಿಡ್ ಈ ಸವಾಲು ಜಯಿಸಿದರು.
ದ್ರಾವಿಡ್ ಮುಖ್ಯ ಕೋಚ್ ಆದ ಸಂದರ್ಭದಲ್ಲಿ ಭಾರತದ ಕ್ರಿಕೆಟ್‌ನಲ್ಲಿ ಎಲ್ಲವೂ ಸರಿಯಿರಲಿಲ್ಲ. ಆಗಷ್ಟೇ ಕೋವಿಡ್ ಹೊಡೆತದಿಂದ ಜಗತ್ತು ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಕ್ರಿಕೆಟ್‌ನಲ್ಲಿಯೂ ಹಲವು ಹೊಸ ನಿಯಮಗಳು ಬಂದಿದ್ದವು. ಟಿ20 ನಾಯಕತ್ವಕ್ಕೆ ವಿದಾಯ ಘೋಷಿಸಿದ್ದ ವಿರಾಟ್ ಅವರನ್ನು ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಬಿಸಿಸಿಐ ಕೆಳಗಿಳಿಸಿತ್ತು. ಇದು ವಿರಾಟ್ ಮತ್ತು ಬಿಸಿಸಿಐ ನಡುವಣ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿತ್ತು. 2022ರ ಜನವರಿಯಲ್ಲಿ ಅವರು ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಈ ಬೆಳವಣಿಗೆಯ ನಡುವೆ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಫಿಟ್‌ನೆಸ್ ಸಮಸ್ಯೆಯಿಂದ ಹೊರಬರುವ ಪ್ರಯತ್ನದಲ್ಲಿದ್ದರು.
ಯುವಪ್ರತಿಭೆಗಳ ದೊಡ್ಡ ದಂಡಿನಲ್ಲಿ ಅರ್ಹರಿಗೆ ಭಾರತ ತಂಡದಲ್ಲಿ ಅವಕಾಶ ಕೊಡುವ ಕಠಿಣ ಸವಾಲು ಕೂಡ ಅವರ ಮುಂದಿತ್ತು. ಆದರೆ ಈ ಸವಾಲುಗಳನ್ನು ದ್ರಾವಿಡ್ ತಮ್ಮ ಶಾಂತಚಿತ್ತದಿಂದಲೇ ಸಾಧಿಸಿದರು. ನಿಗಿನಿಗಿ ಕೆಂಡದಂತೆ ಪುಟಿಯುವ ವಿರಾಟ್ ಮತ್ತು ನಿರುಮ್ಮಳ ವ್ಯಕ್ತಿತ್ವದ ರೋಹಿತ್ ನಡುವೆ ಸಮನ್ವಯ ಏರ್ಪಡುವಂತೆ ಮಾಡುವಲ್ಲಿ ದ್ರಾವಿಡ್ ಪ್ರಯತ್ನವೇ ಪ್ರಮುಖವಾದದ್ದು. ಗಾಯದಿಂದ ದೀರ್ಘ ಬಿಡುವು ಪಡೆದು ಮರಳಿದ ಜಸ್‌ಪ್ರೀತ್ ಬೂಮ್ರಾ, ಆರ್ಷದೀಪ್ ಸಿಂಗ್, ರಿಷಭ್ ಪಂತ್, ರವೀಂದ್ರ ಜಡೇಜ ಮತ್ತು ಸೂರ್ಯಕುಮಾರ್ ಯಾದವ್ ಅವರೆಲ್ಲರ ಏಳು,ಬೀಳುಗಳಲ್ಲಿ ಬೆನ್ನುತಟ್ಟಿ ಮುನ್ನಡೆಸಿದರು. ಅದರ ಫಲ ಈಗ ದೊರೆತಿದೆ.
ಹೋದ ವರ್ಷ ಅಹಮದಾಬಾದಿನಲ್ಲಿಯೇ ಅವರಿಗೆ ಏಕದಿನ ವಿಶ್ವಕಪ್ ಗೌರವ ದೊರೆಯಬೇಕಿತ್ತು. ಆದರೆ ಆ ಟೂರ್ನಿಯುದ್ದಕ್ಕೂ ಅಜೇಯವಾಗಿದ್ದ ತಂಡವು ಫೈನಲ್‌ನಲ್ಲಿ ಮುಗ್ಗರಿಸಿತ್ತು. ಆದರೆ ಈಗ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿದೆ. ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಅಪ್ರತಿಮ ಬ್ಯಾಟರ್ ಆಗಿದ್ದ ದ್ರಾವಿಡ್, ವೇಗವೇ ಸರ್ವಸ್ವವಾಗಿರುವ ಟಿ20 ಕ್ರಿಕೆಟ್‌ನಲ್ಲಿ ‘ಚಾಂಪಿಯನ್ ಕೋಚ್’ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಭಾರತ ತಂಡವನ್ನು ದೇಶಿ ಕೋಚ್ ಕೂಡ ಗೆಲ್ಲಿಸಬಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.