ಬೆಂಗಳೂರು: 2024 ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿ ರೋಚಕ ಹಂತವನ್ನು ತಲುಪಿದ್ದು, ಯಾವೆಲ್ಲ ತಂಡಗಳು 'ಸೂಪರ್ 8'ರ ಹಂತವನ್ನು ಪ್ರವೇಶಿಸಲಿವೆ ಎಂದು ಕುತೂಹಲ ಮನೆ ಮಾಡಿದೆ. ವೆಸ್ಟ್‌ಇಂಡೀಸ್ ಹಾಗೂ ಅಮೆರಿಕದ ಅತಿಥ್ಯದಲ್ಲಿ ಸಾಗುತ್ತಿರುವ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಈಗಾಗಲೇ ಹಲವು ಅಚ್ಚರಿಯ ಫಲಿತಾಂಶಗಳು ದಾಖಲಾಗಿವೆ. ಕೆಲವು ಮಹತ್ವದ ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿವೆ.
ಈಗಾಗಲೇ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ಇಂಡೀಸ್ ಹಾಗೂ ಅಫ್ಗಾನಿಸ್ತಾನ ತಂಡಗಳು ಸೂಪರ್ 8ರ ಹಂತಕ್ಕೆ ಪ್ರವೇಶಿಸಿವೆ. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ರೇಸಿನಲ್ಲಿವೆ. ಮತ್ತೊಂದೆಡೆ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ನಿರ್ಗಮನದ ಹಾದಿ ಹಿಡಿದಿವೆ.
'ಎ' ಗುಂಪಿನಲ್ಲಿ ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ, ಸೂಪರ್ ಎಂಟರ ಹಂತಕ್ಕೆ ಲಗ್ಗೆ ಇಟ್ಟಿದೆ. ಈಗ ಅಮೆರಿಕ ಹಾಗೂ ಪಾಕಿಸ್ತಾನ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಐರ್ಲೆಂಡ್ ವಿರುದ್ಧ ಇಂದು (ಜೂನ್ 14) ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಅಮೆರಿಕ ಗೆದ್ದರೆ ಸೂಪರ್ 8ರ ಹಂತಕ್ಕೆ ಪ್ರವೇಶಿಸಲಿದ್ದು, ಇತಿಹಾಸ ರಚಿಸಲಿದೆ. ಪಾಕಿಸ್ತಾನಕ್ಕೆ ಈಗಾಗಲೇ ಆಘಾತ ನೀಡಿರುವ ಅಮೆರಿಕ, ಭಾರತ ವಿರುದ್ಧದ ಪಂದ್ಯದಲ್ಲೂ ಪರಿಣಾಮ ಬೀರಿತ್ತು. ಅಲ್ಲದೆ ಐರ್ಲೆಂಡ್ ವಿರುದ್ಧವೂ ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸದಲ್ಲಿದೆ.
ಮತ್ತೊಂದೆಡೆ ಪಾಕಿಸ್ತಾನ ಇತರೆ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಬೇಕಿದೆ. ಮುಂದಿನ ಹಂತಕ್ಕೆ ಪ್ರವೇಶಿಸಲು ಅಮೆರಿಕ ವಿರುದ್ಧದ ಪಂದ್ಯದಲ್ಲಿ ಐರ್ಲೆಂಡ್ ಗೆಲುವಿಗಾಗಿ ಕಾಯಬೇಕಿದೆ. ಪಾಕಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಜೂನ್ 16ರಂದು ಆಡಲಿದೆ.
ಈ ಗುಂಪಿನಲ್ಲಿ ಕೆನಡಾ ಹಾಗೂ ಐರ್ಲೆಂಡ್ ಬಹುತೇಕ ಹೊರಬಿದ್ದಿವೆ.
'ಬಿ' ಗುಂಪಿನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಇಂದು ಒಮಾನ್ ವಿರುದ್ಧ ದಾಖಲಿಸಿರುವ ಭರ್ಜರಿ ಗೆಲುವಿನೊಂದಿಗೆ ಚೇತರಿಸಿಕೊಂಡಿದೆ. ಅಲ್ಲದೆ ಮುಂದಿನ ಹಂತಕ್ಕೆ ಪ್ರವೇಶಿಸುವ ಆಸೆ ಚಿಗುರಿದೆ.
ಎಲ್ಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಈಗಾಗಲೇ ಸೂಪರ್ 8ರ ಹಂತಕ್ಕೆ ಲಗ್ಗೆ ಇಟ್ಟಿದೆ. ಎರಡನೇ ಸ್ಥಾನದಲ್ಲಿರುವ ಸ್ಕಾಟ್ಲೆಂಡ್ ಐದು ಅಂಕಗಳನ್ನು ಹೊಂದಿದೆ. ಅಲ್ಲದೆ ಜೂನ್ 15ರಂದು ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಬೇಕಾದ ಕಠಿಣ ಸವಾಲು ಮುಂದಿದೆ.
ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧ ಸ್ಕಾಟ್ಲೆಂಡ್ ಸೋತರೆ ಇಂಗ್ಲೆಂಡ್ ತಂಡದ ಸೂಪರ್ 8 ಪ್ರವೇಶ ಸುಲಭವಾಗಲಿದೆ. ಇದಕ್ಕಾಗಿ ನಮೀಬಿಯಾ ವಿರುದ್ಧ ಜೂನ್ 15ರಂದು ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಬೇಕಿದೆ.
ಈ ಗುಂಪಿನಲ್ಲಿ ನಮೀಬಿಯಾ ಹಾಗೂ ಒಮಾನ್ ತಂಡಗಳು ನಿರ್ಗಮಿಸಿವೆ.
'ಸಿ' ಗುಂಪಿನಲ್ಲಿ ತಲಾ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಅಫ್ಗಾನಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಸೂಪರ್ 8ರ ಹಂತಕ್ಕೆ ಪ್ರವೇಶಿಸಿವೆ. ಹಾಗಾಗಿ ಈ ಗುಂಪಿನ ಉಳಿದ ಪಂದ್ಯಗಳು ಔಪಚಾರಿಕತೆಗಷ್ಟೇ ಸೀಮಿತಗೊಂಡಿದೆ.
ನ್ಯೂಜಿಲೆಂಡ್, ಪಾಪುವಾ ನ್ಯೂಗಿನಿ ಹಾಗೂ ಉಗಾಂಡ ತಂಡಗಳು ನಿರ್ಗಮಿಸಿವೆ. ಈ ಪೈಕಿ ನ್ಯೂಜಿಲೆಂಡ್ ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಗುಂಪು ಹಂತದಿಂದಲೇ ನಿರ್ಗಮಿಸಿದೆ.
'ಡಿ' ಗುಂಪು: ಬಾಂಗ್ಲಾ ಅಥವಾ ನೆದರ್ಲೆಂಡ್ಸ್ ?
'ಡಿ' ಗುಂಪಿನಲ್ಲಿ ಮೂರು ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ಸೂಪರ್ 8ರಲ್ಲಿ ತನ್ನ ಸ್ಥಾನ ಭದ್ರಪಡಿಸಿದೆ. ಈಗ ಮಗದೊಂದು ಸ್ಥಾನಕ್ಕಾಗಿ ಬಾಂಗ್ಲಾದೇಶ, ನೆದರ್ಲೆಂಡ್ಸ್ ಹಾಗೂ ನೇಪಾಳ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಈ ಪೈಕಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬಾಂಗ್ಲಾದೇಶಕ್ಕೆ ಅವಕಾಶ ಹೆಚ್ಚಿದ್ದು, ಜೂನ್ 16ರಂದು ನೇಪಾಳ ವಿರುದ್ಧ ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಬೇಕಿದೆ.
ಒಂದು ವೇಳೆ ಈ ಪಂದ್ಯದಲ್ಲಿ ಸೋತರೆ ನೆದರ್ಲೆಂಡ್ಸ್‌ಗೆ ಅವಕಾಶ ಸಿಗಲಿದ್ದು, ಜೂನ್ 16ರಂದು ಶ್ರೀಲಂಕಾ ವಿರುದ್ಧ ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಬೇಕಿದೆ.
ಈ ವಿಭಾಗದಲ್ಲಿ ಶ್ರೀಲಂಕಾ ನಿರ್ಗಮಿಸಿದ್ದು, ನೇಪಾಳದ ಸಾಧ್ಯತೆ ಕ್ಷೀಣವೆನಿಸಿದೆ.
ಸೂಪರ್ 8ರಲ್ಲಿ ಯಾವ ತಂಡಗಳ ವಿರುದ್ಧ ಭಾರತ ಪೈಪೋಟಿ?
ಸೂಪರ್ 8ರಲ್ಲಿ ಎಂಟು ತಂಡಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಗಾನಿಸ್ತಾನ ತಂಡಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಈ ಗುಂಪಿನ ಇನ್ನೊಂದು ತಂಡ (ಡಿ2) ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಹಾಗಾಗಿ ಸೂಪರ್ 8ರ ಘಟ್ಟದಲ್ಲಿ ರೋಹಿತ್ ಶರ್ಮಾ ಬಳಗಕ್ಕೆ ಆಸ್ಟ್ರೇಲಿಯಾ ಹಾಗೂ ಅಫ್ಗಾನಿಸ್ತಾನದ ಸವಾಲು ಎದುರಾಗಲಿರುವುದು ಖಚಿತವಾಗಿದೆ.
ಎರಡನೇ ಗುಂಪಿನಲ್ಲಿ ವೆಸ್ಟ್‌ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇದ್ದು, ಇನ್ನೆರಡು ತಂಡಗಳು (ಎ2, ಬಿ1) ಇನ್ನಷ್ಟೇ ತೇರ್ಗಡೆ ಹೊಂದಬೇಕಿದೆ. ಸೂಪರ್ 8ರ ಪಂದ್ಯಗಳು ಜೂನ್ 19ರಿಂದ ಆರಂಭವಾಗಲಿದೆ.
ಅಂಕಪಟ್ಟಿ ಇಂತಿದೆ (29ನೇ ಪಂದ್ಯದ ಅಂತ್ಯಕ್ಕೆ):
'ಎ' ಗುಂಪು:
'ಬಿ' ಗುಂಪು:
'ಸಿ' ಗುಂಪು:
'ಡಿ' ಗುಂಪು:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.