ಕಾರವಾರ: ಟಿ20 ವಿಶ್ವಕಪ್‍ನಲ್ಲಿ ಗೆಲುವು ಸಾಧಿಸಿದ ಭಾರತ ತಂಡದ ಭಾಗವಾಗಿರುವ ಉತ್ತರ ಕನ್ನಡ ಜಿಲ್ಲೆ ಕುಮಟಾದ ರಾಘವೇಂದ್ರ ದಿವಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾರೆ.
ವಿಶ್ವಕಪ್ ಗೆಲುವಿನ ಜೊತೆಗೆ ಭಾರತ ತಂಡದ ‘ಥ್ರೋಡೌನ್ ಪರಿಣತ’ ರಾಘವೇಂದ್ರ ಅವರ ಯಶೋಗಾಥೆ ಬಗ್ಗೆಯು ಹೆಚ್ಚು ಚರ್ಚೆಯಾಗುತ್ತಿದೆ. ಕುಮಟಾದಲ್ಲಿ ಇರುವ ನಿವೃತ್ತ ಶಿಕ್ಷಕ ಮೋಹನ ದಿವಗಿ ಮತ್ತು ಚಂದ್ರಕಲಾ ದಂಪತಿಯ ಪುತ್ರ ರಾಘವೇಂದ್ರ ಅವರು ವಿಶ್ವವೇ ಗುರುತಿಸುವಂತ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ ಎಂಬ ಶ್ಲಾಘನೆ ವ್ಯಕ್ತವಾಗಿದೆ.
‘ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದ ರಾಘವೇಂದ್ರ ಮನೆ ಬಿಟ್ಟು ಹುಬ್ಬಳ್ಳಿ ಸೇರಿದರು. ಅಲ್ಲಿ ಸ್ಮಶಾನ, ದೇವಾಲಯದ ಆವರಣದಲ್ಲಿ ಉಳಿಯುತ್ತಿರುವುದು ಪರಿಚಯದವರಿಂದ ತಿಳಿಯಿತು. ಬಳಿಕ ದ್ವಿತೀಯ ಪಿಯುಸಿವರೆಗೆ ಓದಿ, ತನ್ನ ಪರಿಚಯದವರ ಮೂಲಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೇರಿ, ಕಾಲಕ್ರಮೇಣ ಭಾರತ ತಂಡದ ಭಾಗವಾದರು. ಸ್ವಂತ ಶ್ರಮದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಮೋಹನ ದಿವಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ರಾಘವೇಂದ್ರ ಅವರಿಗೆ ಬಾಲ್ಯ ದಿಂದಲೂ ಧಾರ್ಮಿಕ ಭಾವನೆ ಹೆಚ್ಚು. ಬಿಡುವಿದ್ದಾಗಲೆಲ್ಲ ದೇವಾಲಯಗಳಿಗೆ ಭೇಟಿ ನೀಡುವುದು ವಾಡಿಕೆ. ಮೃದು ಸ್ವಭಾವದ ಅವರು ಮಿತಭಾಷಿಯೂ ಹೌದು. ಬೇರೆ ಬೇರೆ ದೇಶಗಳ ತಂಡಗಳಿಂದ ಅವಕಾಶಗಳು ಬಂದರೂ ಭಾರತ ತಂಡವನ್ನು ಬಿಡಲು ಒಪ್ಪಲಿಲ್ಲ’ ಎಂದು ಹೇಳಿದರು.
‘ಸಾಮಾಜಿಕ ಜಾಲತಾಣಗಳಲ್ಲಿ ರಾಘವೇಂದ್ರ ಕುರಿತು ಕೆಲ ತಪ್ಪು ಮಾಹಿತಿ ಹರಿದಾಡುತ್ತಿದೆ. ಅವರು ಹುಬ್ಬಳ್ಳಿಯಲ್ಲಿ ಸ್ಮಶಾನದಲ್ಲಿ ಮಲಗಿರಲಿಲ್ಲ. ಬಿವಿಬಿ ಕಾಲೇಜು ಮೈದಾನದಲ್ಲಿನ ಬದಿಯಲ್ಲಿರುವ ಕೋಣೆಯಲ್ಲಿ ಉಳಿದಿದ್ದರು. ಅವರ ಪ್ರತಿಭೆ ಗಮನಿಸಿ ಪ್ರಭಾಕರ ಕೋರೆ ಹಾಸ್ಟೆಲ್‍ನಲ್ಲಿ ವಸತಿಗೆ ವ್ಯವಸ್ಥೆ ಕಲ್ಪಿಸಿದ್ದರು. ಆರಂಭಿಕ ಹಂತದಿಂದಲೂ ಆತನನ್ನು ಗಮನಿಸಿದ್ದೆ. ಕಠಿಣ ಶ್ರಮ, ಪ್ರತಿಭೆಯಿಂದಲೇ ಆತ ಈ ಮಟ್ಟಕ್ಕೆ ತಲುಪಿದ್ದಾನೆ’ ಎನ್ನುತ್ತಾರೆ ಹುಬ್ಬಳ್ಳಿಯ ಹಿರಿಯ ಕ್ರಿಕೆಟ್ ತರಬೇತುದಾರ ಶಿವಾನಂದ ಗುಂಜಾಳ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.