ಪ್ರಾವಿಡೆನ್ಸ್, ಗಯಾನ: ಆತಿಥೇಯ ವೆಸ್ಟ್ ಇಂಡೀಸ್ ತಂಡದ ಎಡಗೈ ಸ್ಪಿನ್ನರ್ ಅಕೀಲ್ ಹುಸೇನ್ ಅವರ ದಾಳಿಯ ಮುಂದೆ ‘ಕ್ರಿಕೆಟ್ ಲೋಕದ ಶಿಶು’ ಯುಗಾಂಡ ಶರಣಾಯಿತು.
ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ (ಭಾರತೀಯ ಕಾಲಮಾನ) ನಡೆದ ಟಿ20 ವಿಶ್ವಕಪ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ವಿಂಡೀಸ್ 134 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಅಕೀಲ್ ಹುಸೇನ್ ಐದು ವಿಕೆಟ್ ಗಳಿಸಿ ಮಿಂಚಿದರು.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಜಾನ್ಸನ್ ಚಾರ್ಲ್ಸ್ (44; 42ಎ, 4X4, 6X2) ಹಾಗೂ ಆ್ಯಂಡ್ರೆ ರಸೆಲ್ (ಅಜೇಯ 30; 17ಎ, 4X6) ಅವರ ಬ್ಯಾಟಿಂಗ್ ಬಲದಿಂದ ವಿಂಡೀಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 173 ರನ್ ಗಳಿಸಿತು.
ಮಧ್ಯಮ ಕ್ರಮಾಂಕದಲ್ಲಿ ನಿಕೊಲಸ್ ಪೂರನ್, ರೋವ್ಮನ್ ಪೊವೆಲ್ ಹಾಗೂ ಶೆರ್ಫೆನ್ ರುದರ್‌ಫೋರ್ಡ್ ಅವರು ಮಹತ್ವದ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಿತು.
ಗುರಿ ಬೆನ್ನಟ್ಟಿದ್ದ ಯುಗಾಂಡ ತಂಡದ ಬ್ಯಾಟರ್‌ಗಳು 12 ಓವರ್‌ಗಳನ್ನು ಆಡಿದ್ದು ಗಮನ ಸೆಳೆಯುಂತಹದ್ದು. ಆದರೆ, ಅಕೀಲ್ ಅವರ ಸ್ಪಿನ್ ಮೋಡಿಯ ಮುಂದೆ ತಂಡವು 39 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುಗಾಂಡ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಎರಡನೇ ತಂಡವಾಯಿತು. 2014ರಲ್ಲಿ ನೆದರ್ಲೆಂಡ್ಸ್ ತಂಡವು ಶ್ರೀಲಂಕಾ ಎದುರು 39 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 173 (ಜಾನ್ಸನ್ ಚಾರ್ಲ್ಸ್ 44, ನಿಕೊಲಸ್ ಪೂರನ್ 22, ರೋವ್ಮನ್ ಪೊವೆಲ್ 23, ಶೆರ್ಫೆನ್ ರುದರ್‌ಫೋರ್ಡ್ 22, ಆ್ಯಂಡ್ರೆ ರಸೆಲ್ ಔಟಾಗದೆ 30, ಬ್ರಯನ್ ಮಸಾಬಾ 31ಕ್ಕೆ2) ಯುಗಾಂಡ: 12 ಓವರ್‌ಗಳಲ್ಲಿ 39 ಈ(ಜುಮಾ ಮಿಯಾಗಿ ಔಟಾಗದೆ 13, ಅಕೀಲ್ ಹುಸೇನ್ 11ಕ್ಕೆ5, ಅಲ್ಝರಿ ಜೋಸೆಫ್ 6ಕ್ಕೆ2) ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 134 ರನ್ ಜಯ. ಪಂದ್ಯಶ್ರೇಷ್ಠ: ಅಕೀಲ್ ಹುಸೇನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.